May 30, 2026
Saturday, May 30, 2026
spot_img

ಹೊಸ ಸಾಹಸಕ್ಕೆ ಕೈ ಹಾಕಿದ ಕುಡ್ಲದ ಬೆಡಗಿ: ಮಂಗಳೂರಲ್ಲಿ ಶುರುವಾಗಿದೆ ‘ಪಟಾಕಿ ಕಿಚನ್’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಗ್ ಬಾಸ್ ಮೂಲಕ ಅಪಾರ ಜನಪ್ರಿಯತೆ ಪಡೆದ ರಕ್ಷಿತಾ ಶೆಟ್ಟಿ ಇದೀಗ ತಮ್ಮ ಅಭಿಮಾನಿಗಳಿಗೆ ಹೊಸ ಸರ್ಪ್ರೈಸ್ ನೀಡಿದ್ದಾರೆ.

ಅಡುಗೆ ವಿಡಿಯೋಗಳ ಮೂಲಕ ಗುರುತಿಸಿಕೊಂಡಿದ್ದ ಅವರು ಈಗ ‘ಪಟಾಕಿ ಕಿಚನ್’ ಎಂಬ ಹೊಸ ಕಿಚನ್ ಪ್ರಾಜೆಕ್ಟ್ ಆರಂಭಿಸಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ವಿಶೇಷವೆಂದರೆ ಈ ಕಿಚನ್‌ನ್ನು ಹಳ್ಳಿಯ ಸೊಗಡಿನಲ್ಲಿ ನಿರ್ಮಿಸಲಾಗಿದ್ದು, ಮನೆಯ ರುಚಿಯನ್ನು ನೆನಪಿಸುವ ರೀತಿಯಲ್ಲಿ ಅಡುಗೆ ಕಾರ್ಯಕ್ರಮಗಳನ್ನು ನಡೆಸಲು ಸಿದ್ಧತೆ ಮಾಡಲಾಗಿದೆ.

ಮೂಲತಃ ಯೂಟ್ಯೂಬ್ ಕ್ರಿಯೇಟರ್ ಆಗಿ ತಮ್ಮ ಪ್ರಯಾಣ ಆರಂಭಿಸಿದ್ದ ರಕ್ಷಿತಾ, ವಿಶಿಷ್ಟ ಮಾತಿನ ಶೈಲಿ ಮತ್ತು ಸಾಂಪ್ರದಾಯಿಕ ಅಡುಗೆ ವಿಡಿಯೋಗಳ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದರು. ಇದೇ ಜನಪ್ರಿಯತೆಯೇ ಅವರಿಗೆ ಬಿಗ್ ಬಾಸ್ ವೇದಿಕೆಗೆ ದಾರಿ ಮಾಡಿಕೊಟ್ಟಿತು. ಕಾರ್ಯಕ್ರಮದಲ್ಲಿ ಅವರು ರನ್ನರ್ ಅಪ್ ಆಗಿ ಹೊರಹೊಮ್ಮಿ ತಮ್ಮ ಅಭಿಮಾನಿ ಬಳಗವನ್ನು ಇನ್ನಷ್ಟು ವಿಸ್ತರಿಸಿಕೊಂಡರು.

ಇದನ್ನೂ ಓದಿ:

ಬಿಗ್ ಬಾಸ್ ಮನೆಯಲ್ಲಿ ಅವರಿಗೆ ‘ಪಟಾಕಿ ರಕ್ಷಿತಾ’ ಎಂಬ ಬಿರುದು ಸಿಕ್ಕಿತ್ತು. ಅದನ್ನೇ ಮುಂದುವರಿಸಿಕೊಂಡು ತಮ್ಮ ಹೊಸ ಅಡುಗೆ ಪ್ರಯತ್ನಕ್ಕೆ ‘ಪಟಾಕಿ ಕಿಚನ್’ ಎಂದು ಹೆಸರು ಇಟ್ಟಿದ್ದಾರೆ. ಉದ್ಘಾಟನಾ ಕಾರ್ಯಕ್ರಮಕ್ಕೆ ರಘು ವಿಶೇಷವಾಗಿ ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸಿ ರಿಬ್ಬನ್ ಕಟ್ ಮಾಡುವ ಮೂಲಕ ಶುಭಾರಂಭ ಮಾಡಿದರು.

ಗ್ರಾಮೀಣ ಸೊಗಡಿನ ಸೆಟ್‌ಅಪ್, ಮಣ್ಣಿನ ಪಾತ್ರೆಗಳು ಮತ್ತು ಸಾಂಪ್ರದಾಯಿಕ ವಾತಾವರಣ ಈ ಕಿಚನ್‌ಗೆ ವಿಶೇಷ ಆಕರ್ಷಣೆ ನೀಡಿದೆ. ಮೊದಲ ದಿನವೇ ರಘು ಅವರು ಅಡುಗೆಮನೆಯಲ್ಲಿ ಏಡಿ ಘೀ ರೋಸ್ಟ್ ತಯಾರಿಸಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದರು. ರಕ್ಷಿತಾ ಅವರ ಈ ಹೊಸ ಪ್ರಯತ್ನಕ್ಕೆ ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !