July 28, 2026
Tuesday, July 28, 2026
spot_img

ಮಹಿಳಾ ಮೀಸಲಾತಿಗೆ ‘ಜೈ’, ಕ್ಷೇತ್ರ ಪುನರ್ವಿಂಗಡಣೆಗೆ ‘ನೋ’: ಸಂಸತ್ತಿನಲ್ಲಿ ಪ್ರತಿಪಕ್ಷಗಳ ರಣತಂತ್ರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರ ಸರ್ಕಾರ ಮಂಡಿಸಲು ಉದ್ದೇಶಿಸಿರುವ ಸಂವಿಧಾನ ತಿದ್ದುಪಡಿ ಮಸೂದೆಯ ವಿರುದ್ಧ ಪ್ರತಿಪಕ್ಷಗಳು ಒಗ್ಗಟ್ಟಿನ ಮಂತ್ರ ಜಪಿಸಿವೆ. ಮುಂಬರುವ ವಿಶೇಷ ಸಂಸತ್ತಿನ ಅಧಿವೇಶನದಲ್ಲಿ ‘ಕ್ಷೇತ್ರ ಪುನರ್ವಿಂಗಡಣೆ’ ನಿಬಂಧನೆಗಳ ವಿರುದ್ಧ ಜಂಟಿಯಾಗಿ ಮತ ಚಲಾಯಿಸಲು ‘ಇಂಡಿಯಾ’ ಮೈತ್ರಿಕೂಟದ ಪಕ್ಷಗಳು ನಿರ್ಧರಿಸಿವೆ.

ಈ ಕುರಿತು ಸ್ಪಷ್ಟನೆ ನೀಡಿರುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, “ನಾವು ಮಹಿಳಾ ಮೀಸಲಾತಿಯ ವಿರೋಧಿಗಳಲ್ಲ. ಆದರೆ, ಸರ್ಕಾರ ಈ ಮಸೂದೆಯನ್ನು ಜಾರಿಗೆ ತರುತ್ತಿರುವ ‘ವಿಧಾನ’ ಪ್ರಜಾಪ್ರಭುತ್ವ ವಿರೋಧಿಯಾಗಿದೆ. ಇದು ಕೇವಲ ರಾಜಕೀಯ ಪ್ರೇರಿತ ನಡೆಯಾಗಿದ್ದು, ವಿರೋಧ ಪಕ್ಷಗಳನ್ನು ಹತ್ತಿಕ್ಕುವ ಸಂಚು ಇದರಲ್ಲಿದೆ,” ಎಂದು ಕಿಡಿಕಾರಿದ್ದಾರೆ.

ಗುರುವಾರದಿಂದ (ಏಪ್ರಿಲ್ 16) ಆರಂಭವಾಗಲಿರುವ ಮೂರು ದಿನಗಳ ವಿಶೇಷ ಅಧಿವೇಶನಕ್ಕೆ ಕಾರ್ಯತಂತ್ರ ರೂಪಿಸಲು ದೆಹಲಿಯ ಖರ್ಗೆ ನಿವಾಸದಲ್ಲಿ ಮಹತ್ವದ ಸಭೆ ನಡೆಯಿತು. ಆಮ್ ಆದ್ಮಿ ಪಕ್ಷವನ್ನು ಹೊರತುಪಡಿಸಿ, ಮೈತ್ರಿಕೂಟದ ಪ್ರಮುಖ ನಾಯಕರು ಈ ಚರ್ಚೆಯಲ್ಲಿ ಭಾಗಿಯಾಗಿದ್ದರು. ಹಳೆಯ ತಿದ್ದುಪಡಿಯನ್ನೇ ಜಾರಿಗೆ ತರಬೇಕೆಂದು ಒತ್ತಾಯಿಸಿರುವ ವಿಪಕ್ಷಗಳು, ಕ್ಷೇತ್ರ ಪುನರ್ವಿಂಗಡಣೆಯ ಹೆಸರಿನಲ್ಲಿ ಬಿಜೆಪಿ ರಾಜಕೀಯ ತಂತ್ರಗಾರಿಕೆ ನಡೆಸುತ್ತಿದೆ ಎಂದು ಆರೋಪಿಸಿವೆ.

ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಮಾತನಾಡಿ, “ಸೀಮಾ ನಿರ್ಣಯವು ಕೇವಲ ಆಡಳಿತ ಪಕ್ಷವು ಬಹುಮತ ಪಡೆಯಲು ಬಳಸುತ್ತಿರುವ ಒಂದು ಸಾಧನವಾಗಿದೆ. ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ಸಿಗಬೇಕು ಎಂಬುದು ನಮ್ಮ ಆಶಯವೂ ಹೌದು, ಆದರೆ ಕ್ಷೇತ್ರ ಪುನರ್ವಿಂಗಡಣೆಯ ಮೂಲಕ ಜನಮತವನ್ನು ತಿರುಚುವ ಪ್ರಯತ್ನವನ್ನು ನಾವು ಸಂಪೂರ್ಣವಾಗಿ ವಿರೋಧಿಸುತ್ತೇವೆ,” ಎಂದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !