ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ರೈಲ್ವೆ ಕೂಡಾ ಪರ್ಯಾಯ ಇಂಧನ ಬಳಕೆಯತ್ತ ಮಹತ್ವದ ಹೆಜ್ಜೆ ಇಡುತ್ತಿದ್ದು, ಇದರ ಭಾಗವಾಗಿ ದೇಶದ ಮೊದಲ LNG-ಡೀಸೆಲ್ ಡ್ಯುಯಲ್ ಫ್ಯೂಯೆಲ್ ರೈಲಿಗೆ ಭಾನುವಾರ ಗುಜರಾತ್‌ನ ಸಬರಮತಿ ರೈಲು ನಿಲ್ದಾಣದಿಂದ ಚಾಲನೆ ನೀಡಲಾಗಿದೆ.
ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಹಾಗೂ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಜಂಟಿಯಾಗಿ ಈ ರೈಲಿಗೆ ಹಸಿರು ನಿಶಾನೆ ತೋರಿಸಿದರು.
ಡೀಸೆಲ್ ಮೇಲಿನ ಅವಲಂಬನೆ ಕಡಿಮೆ ಮಾಡಿ ಪರ್ಯಾಯ ಇಂಧನ ಬಳಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಹೊಸ ವ್ಯವಸ್ಥೆಯಲ್ಲಿ ರೈಲು ಸಂಪೂರ್ಣವಾಗಿ LNGಯನ್ನೇ ಅವಲಂಬಿಸದೆ ಡೀಸೆಲ್ ಮತ್ತು LNG ಎರಡನ್ನೂ ಬಳಸುವ ಡ್ಯುಯಲ್ ಫ್ಯೂಯೆಲ್ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಈ ಮೂಲಕ ಅಗತ್ಯಕ್ಕೆ ಅನುಗುಣವಾಗಿ ಎರಡೂ ಇಂಧನಗಳನ್ನು ಬಳಸಲು ಸಾಧ್ಯವಾಗಲಿದೆ.
ಶೇ.40ರವರೆಗೆ ಡೀಸೆಲ್ ಬಳಕೆ ಕಡಿತ
ಈ ಯೋಜನೆಯಡಿ ಸಬರಮತಿ ಇಂಟಿಗ್ರೇಟೆಡ್ ಕೋಚಿಂಗ್ ಡಿಪೋದಲ್ಲಿದ್ದ ತಲಾ 1,400 ಎಚ್‌ಪಿ ಸಾಮರ್ಥ್ಯದ ಎರಡು Driving Power Cars (DPCs)ಗಳನ್ನು ಡೀಸೆಲ್-ಎಲ್‌ಎನ್‌ಜಿ ಡ್ಯುಯಲ್ ಫ್ಯೂಯೆಲ್ ವ್ಯವಸ್ಥೆಗೆ ಪರಿವರ್ತಿಸಲಾಗಿದೆ.
ರೈಲ್ವೆ ನೀಡಿರುವ ಮಾಹಿತಿಯ ಪ್ರಕಾರ, ಹೊಸ ವ್ಯವಸ್ಥೆಯಲ್ಲಿ LNG ಬಳಕೆಯ ಮೂಲಕ ಸಾಂಪ್ರದಾಯಿಕ ಡೀಸೆಲ್ ಬಳಕೆಯನ್ನು ಸುಮಾರು ಶೇ.40ರವರೆಗೆ ಕಡಿಮೆ ಮಾಡಬಹುದಾಗಿದೆ. ಇದರಿಂದ ಇಂಧನ ವೆಚ್ಚ ಕಡಿಮೆಯಾಗುವುದರ ಜೊತೆಗೆ ಕಾರ್ಬನ್ ಡೈಆಕ್ಸೈಡ್, ನೈಟ್ರೋಜನ್ ಆಕ್ಸೈಡ್ ಹಾಗೂ ಇತರ ಮಾಲಿನ್ಯಕಾರಕಗಳ ಹೊರಸೂಸುವಿಕೆಯನ್ನೂ ತಗ್ಗಿಸುವ ನಿರೀಕ್ಷೆಯಿದೆ. ಈ ತಂತ್ರಜ್ಞಾನವನ್ನು ನೇರವಾಗಿ ರೈಲು ಕಾರ್ಯಾಚರಣೆಗೆ ತರುವ ಮುನ್ನ ಎರಡು DPCಗಳಲ್ಲಿ 2,000 ಕಿ.ಮೀ.ಗೂ ಹೆಚ್ಚು ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿದೆ. ಹೊಸ ವ್ಯವಸ್ಥೆಯ ಕಾರ್ಯಕ್ಷಮತೆ ಮತ್ತು ವಿಶ್ವಾಸಾರ್ಹತೆಯನ್ನು ಪರಿಶೀಲಿಸಿದ ಬಳಿಕ ಇದೀಗ ಅಧಿಕೃತವಾಗಿ ರೈಲಿಗೆ ಚಾಲನೆ ನೀಡಲಾಗಿದೆ.
ಮೊದಲ ಸಂಚಾರ ಸಬರಮತಿ–ಮೆಹಸಾನಾ
ದೇಶದ ಮೊದಲ LNG-ಡೀಸೆಲ್ ಡ್ಯುಯಲ್ ಫ್ಯೂಯೆಲ್ ರೈಲು 8 ಬೋಗಿಗಳ ನಾನ್-ಎಸಿ ಚೇರ್ ಕಾರ್ ರೈಲು ಆಗಿದ್ದು, ಉದ್ಘಾಟನಾ ಸಂಚಾರವನ್ನು ಸಬರಮತಿ–ಮೆಹಸಾನಾ ಮಾರ್ಗದಲ್ಲಿ ನಡೆಸಲಾಗಿದೆ. ರೈಲಿನ ಅಂತಿಮ ನಿಯಮಿತ ಮಾರ್ಗವನ್ನು ಮುಂದಿನ ಹಂತದಲ್ಲಿ ನಿರ್ಧರಿಸಲಾಗುವುದು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ರೈಲ್ವೆಯ ಅಂದಾಜಿನ ಪ್ರಕಾರ, LNG ಬಳಕೆಯಿಂದ ಒಂದು DPCಗೆ ವಾರ್ಷಿಕ ಸುಮಾರು 11.9 ಲಕ್ಷ ರೂ.ನಷ್ಟು ದಷ್ಟು ಇಂಧನ ಉಳಿತಾಯ ಸಾಧ್ಯವಾಗಲಿದೆ.
ಸಬರಮತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ LNG ರೈಲಿನ ಚಾಲನೆಯ ಜೊತೆಗೆ 1,542 ಕೋಟಿ ರೂ.ಗೂ ಅಧಿಕ ಮೊತ್ತದ ವಿವಿಧ ರೈಲ್ವೆ ಯೋಜನೆಗಳಿಗೂ ಚಾಲನೆ ನೀಡಲಾಯಿತು.



