ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಲವು ರಾಜಕೀಯ ಚರ್ಚೆಗಳು, ತೀವ್ರ ವಾಕ್ಸಮರ ಮತ್ತು ಮಹತ್ವದ ನಿರ್ಣಯಗಳ ನಡುವೆ ಸಂಸತ್ ಬಜೆಟ್ ಅಧಿವೇಶನಕ್ಕೆ ತೆರೆಬಿದ್ದಿದೆ. ಶನಿವಾರ ಲೋಕಸಭೆ ಹಾಗೂ ರಾಜ್ಯಸಭೆ ಎರಡೂ ಸದನಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.
ರಾಜ್ಯಸಭೆಯ ಕಾರ್ಯಕ್ಷಮತೆ ಕುರಿತು ಮಾಹಿತಿ ನೀಡಿದ ರಾಜ್ಯಸಭೆ ಅಧ್ಯಕ್ಷ ಸಿ.ಪಿ. ರಾಧಾಕೃಷ್ಣನ್, ಸದನವು ಒಟ್ಟು 157 ಗಂಟೆ 40 ನಿಮಿಷಗಳ ಕಾಲ ಕಾರ್ಯನಿರ್ವಹಿಸಿ ಶೇ.110ರಷ್ಟು ಫಲಪ್ರದತೆ ಸಾಧಿಸಿದೆ ಎಂದು ತಿಳಿಸಿದ್ದಾರೆ. ಏಪ್ರಿಲ್ 16ರಿಂದ 18ರವರೆಗೆ ನಡೆದ ವಿಶೇಷ ಅಧಿವೇಶನದಲ್ಲಿ ಹರಿವಂಶ್ ನಾರಾಯಣ್ ಸಿಂಗ್ ಅವರನ್ನು ಮೂರನೇ ಅವಧಿಗೆ ಉಪಸಭಾಪತಿಯಾಗಿ ಆಯ್ಕೆ ಮಾಡಲಾಗಿದೆ.
ಈ ಅವಧಿಯಲ್ಲಿ ರಾಷ್ಟ್ರಪತಿಯ ಭಾಷಣದ ಮೇಲಿನ ವಂದನಾ ನಿರ್ಣಯ ಕುರಿತು 79 ಮಂದಿ ಸದಸ್ಯರು ಚರ್ಚೆಯಲ್ಲಿ ಪಾಲ್ಗೊಂಡಿದ್ದು, 2026–27ರ ಕೇಂದ್ರ ಬಜೆಟ್ ಕುರಿತಾಗಿ 97 ಮಂದಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜೊತೆಗೆ ಪ್ರಮುಖ ಸಚಿವಾಲಯಗಳ ಕಾರ್ಯಚಟುವಟಿಕೆಗಳು, ಭಾರತ–ಅಮೆರಿಕಾ ವ್ಯಾಪಾರ ಒಪ್ಪಂದ ಮತ್ತು ಮಧ್ಯಪ್ರಾಚ್ಯದ ಪರಿಸ್ಥಿತಿಯ ಕುರಿತು ಸದನದಲ್ಲಿ ಚರ್ಚೆಗಳು ನಡೆದವು.
ಇದನ್ನೂ ಓದಿ:
ಅಧಿವೇಶನದ ವೇಳೆ 117 ಪ್ರಶ್ನೆಗಳು, 446 ಶೂನ್ಯಾವಧಿ ಪ್ರಸ್ತಾಪಗಳು ಹಾಗೂ 207 ವಿಶೇಷ ಉಲ್ಲೇಖಗಳು ದಾಖಲಾಗಿವೆ. ಲೋಕಸಭೆಯಲ್ಲಿ ಸ್ಪೀಕರ್ ಓಂ ಬಿರ್ಲಾ ಸಮಾರೋಪ ಭಾಷಣ ನೀಡಿ, ಬೆಳಿಗ್ಗೆ 11 ಗಂಟೆಗೆ ಸದನವನ್ನು ಮುಂದೂಡಿದರು.
ಇದಕ್ಕೂ ಮುನ್ನ, ಮಹಿಳೆಯರಿಗೆ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಶೇ.33ರಷ್ಟು ಮೀಸಲಾತಿ ನೀಡುವ ಸಂವಿಧಾನ ತಿದ್ದುಪಡಿ ಮಸೂದೆ ಮತದಾನದಲ್ಲಿ ಸೋಲು ಕಂಡಿತು. ಈ ಮಸೂದೆಗೆ ಅಗತ್ಯವಿದ್ದ ಬಹುಮತ ಸಿಗದೆ ವಿಫಲವಾಗಿದ್ದು, ಸದಸ್ಯರ ಸಂಖ್ಯೆಯನ್ನು 543ರಿಂದ 816ಕ್ಕೆ ಹೆಚ್ಚಿಸುವ ಪ್ರಸ್ತಾಪವೂ ಇದರೊಳಗೆ ಸೇರಿತ್ತು.



