ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಈವರೆಗೆ ಯಾವುದೇ ದಿಗ್ಗಜ ತಂಡಗಳಿಗೂ ಸಾಧ್ಯವಾಗದ ಅಪರೂಪದ ದಾಖಲೆಯೊಂದನ್ನು ಪಂಜಾಬ್ ಕಿಂಗ್ಸ್ ತನ್ನ ಹೆಸರಿಗೆ ಬರೆದುಕೊಂಡಿದೆ. ಕೇವಲ 6 ಪಂದ್ಯಗಳಲ್ಲಿ 11 ಅಂಕಗಳನ್ನು ಕಲೆಹಾಕುವ ಮೂಲಕ ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಪಡೆ ಹೊಸ ಇತಿಹಾಸ ನಿರ್ಮಿಸಿದೆ.
ಮುಲ್ಲನ್‌ಪುರದಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ 29ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಅಕ್ಷರಶಃ ಅಬ್ಬರಿಸಿತು. ಮೊದಲು ಬ್ಯಾಟ್ ಮಾಡಿದ ಪಂಜಾಬ್, ನಿಗದಿತ 20 ಓವರ್‌ಗಳಲ್ಲಿ ಬರೋಬ್ಬರಿ 254 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಈ ಗುರಿ ಬೆನ್ನಟ್ಟಿದ ಲಕ್ನೋ ತಂಡ 200 ರನ್‌ಗಳಿಗಷ್ಟೇ ಸೀಮಿತಗೊಂಡು, 54 ರನ್‌ಗಳ ಸೋಲೊಪ್ಪಿಕೊಂಡಿತು.
ಈ ಗೆಲುವಿನೊಂದಿಗೆ ಪಂಜಾಬ್ ತಂಡ ಐಪಿಎಲ್ ಆವೃತ್ತಿಯ ಮೊದಲ 6 ಪಂದ್ಯಗಳಲ್ಲಿ ಒಂದೂ ಸೋಲು ಕಾಣದ ಮೊದಲ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಹಿಂದೆ 2015ರಲ್ಲಿ ರಾಜಸ್ಥಾನ್ ರಾಯಲ್ಸ್ ಮೊದಲ 5 ಪಂದ್ಯಗಳನ್ನು ಗೆದ್ದು 10 ಅಂಕ ಪಡೆದಿದ್ದು ಇದುವರೆಗಿನ ದಾಖಲೆಯಾಗಿತ್ತು. ಈಗ ಪಂಜಾಬ್ ಮೊದಲ 6 ಪಂದ್ಯಗಳಲ್ಲಿ 5 ಗೆಲುವು ಮತ್ತು ಮಳೆಯಿಂದ ರದ್ದಾದ ಒಂದು ಪಂದ್ಯದ 1 ಅಂಕ ಸೇರಿ ಒಟ್ಟು 11 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿದೆ.
ಶ್ರೇಯಸ್ ಅಯ್ಯರ್ ಸಾರಥ್ಯದಲ್ಲಿ ಅದ್ಭುತ ಫಾರ್ಮ್‌ನಲ್ಲಿರುವ ಪಂಜಾಬ್ ಕಿಂಗ್ಸ್, ಈ ಬಾರಿ ಟೂರ್ನಿಯಲ್ಲಿ ಅತ್ಯಂತ ಬಲಿಷ್ಠ ತಂಡವಾಗಿ ಹೊರಹೊಮ್ಮಿದ್ದು, ಅಭಿಮಾನಿಗಳಲ್ಲಿ ಕಪ್ ಗೆಲ್ಲುವ ಭರವಸೆ ಮೂಡಿಸಿದೆ.



