ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್‌ನ 28ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡ ಮುಖಭಂಗ ಅನುಭವಿಸಿದೆ. ಮೊದಲು ಬ್ಯಾಟ್ ಮಾಡಿ ಕೇವಲ 155 ರನ್ ಗಳಿಸಿದ್ದರೂ, ಪಂದ್ಯವನ್ನು ಗೆಲ್ಲುವ ಸುವರ್ಣ ಅವಕಾಶ ರಾಜಸ್ಥಾನಕ್ಕೆ ಇತ್ತು. ಆದರೆ, ನಾಯಕ ರಿಯಾನ್ ಪರಾಗ್ ತೆಗೆದುಕೊಂಡ ಒಂದು ಅಚ್ಚರಿಯ ನಿರ್ಧಾರ ಇಡೀ ಪಂದ್ಯದ ಗತಿಯನ್ನೇ ಬದಲಿಸಿತು.
ಪಂದ್ಯದಲ್ಲಿ ಅತ್ಯಂತ ಪರಿಣಾಮಕಾರಿ ಬೌಲಿಂಗ್ ಮಾಡಿದ್ದು ರವೀಂದ್ರ ಜಡೇಜಾ. ಕೇವಲ 3 ಓವರ್‌ಗಳಲ್ಲಿ 8 ರನ್ ನೀಡಿ 2 ವಿಕೆಟ್ ಕಬಳಿಸಿದ್ದ ಜಡೇಜಾಗೆ ಕೋಟಾದ 4ನೇ ಓವರ್ ನೀಡಲು ಪರಾಗ್ ಹಿಂದೇಟು ಹಾಕಿದರು. ಜಡೇಜಾ ಅವರಂತಹ ಅನುಭವಿ ಬೌಲರ್ ಕೈಯಲ್ಲಿದ್ದರೂ, ನಿರ್ಣಾಯಕ ಡೆತ್ ಓವರ್‌ಗಳಲ್ಲಿ ಅನ್-ಕ್ಯಾಪ್ಡ್ ಬೌಲರ್ ಬ್ರಿಜೇಶ್ ಶರ್ಮಾ ಅವರಿಗೆ ಚೆಂಡು ನೀಡಲಾಯಿತು. ಬ್ರಿಜೇಶ್ ಎಸೆದ 10 ಎಸೆತಗಳಲ್ಲಿ 21 ರನ್ ಬಿಟ್ಟುಕೊಟ್ಟಿದ್ದು ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು.
“ಕ್ರೀಸ್‌ನಲ್ಲಿ ರಿಂಕು ಸಿಂಗ್ ಮತ್ತು ಅನುಕುಲ್ ರಾಯ್ ಅವರಂತಹ ಎಡಗೈ ಬ್ಯಾಟರ್‌ಗಳಿದ್ದರು. ಎಡಗೈ ಸ್ಪಿನ್ನರ್ ಜಡೇಜಾ ಅವರಿಗೆ ಬೌಲಿಂಗ್ ನೀಡಿದರೆ ರನ್ ಹರಿಯಬಹುದು ಎಂಬ ‘ಮ್ಯಾಚ್-ಅಪ್’ ಲೆಕ್ಕಾಚಾರದಿಂದ ನಾನು ಈ ನಿರ್ಧಾರ ಮಾಡಿದೆ” ಎಂದು ಪರಾಗ್ ಪಂದ್ಯದ ನಂತರ ತಿಳಿಸಿದ್ದಾರೆ.
ರಿಯಾನ್ ಪರಾಗ್ ನಡೆಯನ್ನು ಮಾಜಿ ಕ್ರಿಕೆಟಿಗ ಆರ್. ಅಶ್ವಿನ್ ಟೀಕಿಸಿದ್ದಾರೆ. “ಪರಿಸ್ಥಿತಿ ಏನೇ ಇರಲಿ, ವಿಶ್ವದರ್ಜೆಯ ಬೌಲರ್ ಜಡೇಜಾ ಅನುಭವದ ಮೇಲೆ ನಂಬಿಕೆ ಇಡಬೇಕಿತ್ತು. ಬರಿ ಲೆಕ್ಕಾಚಾರದಿಂದ ಪಂದ್ಯ ಗೆಲ್ಲಲು ಸಾಧ್ಯವಿಲ್ಲ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಸತತ ಎರಡನೇ ಬಾರಿಗೆ ಜಡೇಜಾ ಅವರನ್ನು ಸರಿಯಾಗಿ ಬಳಸಿಕೊಳ್ಳದ ಪರಾಗ್ ನಡೆ ಈಗ ವಿಶ್ಲೇಷಕರ ಕೆಂಗಣ್ಣಿಗೆ ಗುರಿಯಾಗಿದೆ.



