June 17, 2026
Wednesday, June 17, 2026
spot_img

ಹೊಸಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪರಿಚಿತ ವಾಹನ ಡಿಕ್ಕಿಯಾಗಿ ಗಂಡು ಚಿರತೆ ಸಾ*ವು

ಹೊಸದಿಗಂತ ವಿಜಯನಗರ:

ಹೊಸಪೇಟೆ ತಾಲೂಕಿನ ತಿಮ್ಮಲಾಪುರ ಟೋಲ್ ಪ್ಲಾಜಾ ಸಮೀಪದ ಗಿರೇನಹಳ್ಳಿ ಕ್ರಾಸ್ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ. ಅಂದಾಜು 5 ರಿಂದ 7 ವರ್ಷ ಪ್ರಾಯದ ಗಂಡು ಚಿರತೆಯು ರಸ್ತೆ ದಾಟುತ್ತಿದ್ದಾಗ, ಅತಿ ವೇಗವಾಗಿ ಬಂದ ಅಪರಿಚಿತ ವಾಹನವೊಂದು ಜೋರಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಚಿರತೆಯು ಸ್ಥಳದಲ್ಲೇ ಕೊನೆಯುಸಿರೆಳೆದಿದೆ.

ಅಧಿಕಾರಿಗಳ ಭೇಟಿ ಮತ್ತು ಪರಿಶೀಲನೆ

ವಿಷಯ ತಿಳಿಯುತ್ತಿದ್ದಂತೆ ತಹಶೀಲ್ದಾರ್ ಎಂ. ಶೃತಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕವಿತಾ ಈರನಟ್ಟಿ, ಹಾಗೂ ವಲಯ ಅರಣ್ಯಾಧಿಕಾರಿ ಕೌಶಿಕ್ ದಳವಾಯಿ ಅವರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಚಿಲಕನಹಟ್ಟಿಯ ಪಶು ವೈದ್ಯಾಧಿಕಾರಿ ಡಾ. ಕಾರ್ತಿಕ್ ಅವರು ಮೃತ ಚಿರತೆಯ ಮರಣೋತ್ತರ ಪರೀಕ್ಷೆ ನೆರವೇರಿಸಿದರು.

ಅರಣ್ಯ ಇಲಾಖೆಯಿಂದ ತನಿಖೆ

ನಿಯಮಾನುಸಾರ ಚಿರತೆಯ ಕಳೇಬರವನ್ನು ದಹನ ಮಾಡಲಾಗಿದ್ದು, ಅಪಘಾತ ಎಸಗಿ ಪರಾರಿಯಾಗಿರುವ ಅಪರಿಚಿತ ವಾಹನ ಮತ್ತು ಚಾಲಕನ ಪತ್ತೆಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ. ವನ್ಯಜೀವಿಗಳ ಓಡಾಟ ಇರುವ ಪ್ರದೇಶದಲ್ಲಿ ಸವಾರರು ಜಾಗರೂಕರಾಗಿರಲು ಕೋರಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !