ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಡಿಯನ್ ಪ್ರೀಮಿಯರ್ ಲೀಗ್‌ನ ಸಮರ ಈಗ ರೋಚಕ ಘಟ್ಟ ತಲುಪಿದೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ದಾಖಲಿಸಿದ 54 ರನ್‌ಗಳ ಭರ್ಜರಿ ಜಯದೊಂದಿಗೆ ಅಂಕಪಟ್ಟಿ ಸಂಪೂರ್ಣ ಅದಲು ಬದಲಾಗಿದೆ. ಸದ್ಯ 29 ಪಂದ್ಯಗಳ ಮುಕ್ತಾಯಕ್ಕೆ ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಪಡೆ ಅಂಕಪಟ್ಟಿಯಲ್ಲಿ ಸಿಂಹಾಸನ ಅಲಂಕರಿಸಿದೆ.
ಈ ಬಾರಿಯ ‘ಜೈಂಟ್ ಕಿಲ್ಲರ್’ ಆಗಿ ಹೊರಹೊಮ್ಮಿರುವ ಪಂಜಾಬ್, ಆಡಿದ 6 ಪಂದ್ಯಗಳಲ್ಲಿ 5 ಗೆಲುವು ಹಾಗೂ ಒಂದು ರದ್ದಾದ ಪಂದ್ಯದೊಂದಿಗೆ ಒಟ್ಟು 11 ಅಂಕ ಗಳಿಸಿದೆ. +1.420 ನೆಟ್ ರನ್ ರೇಟ್‌ನೊಂದಿಗೆ ಅಗ್ರಸ್ಥಾನದಲ್ಲಿ ಭದ್ರವಾಗಿದೆ.
ಆರ್ಸಿಬಿ ಅಭಿಮಾನಿಗಳಲ್ಲಿ ಭರವಸೆ ಹೆಚ್ಚಿದೆ. ಆಡಿದ 6 ಪಂದ್ಯಗಳಲ್ಲಿ 4 ಗೆಲುವು ಸಾಧಿಸಿರುವ ಬೆಂಗಳೂರು, 8 ಅಂಕ ಹಾಗೂ +1.171 ನೆಟ್ ರನ್ ರೇಟ್‌ನೊಂದಿಗೆ ಎರಡನೇ ಸ್ಥಾನದಲ್ಲಿದೆ.
ರಿಯಾನ್ ಪರಾಗ್ ನೇತೃತ್ವದ ರಾಜಸ್ಥಾನ್ ಪಡೆ ಕೂಡ 4 ಗೆಲುವುಗಳೊಂದಿಗೆ 8 ಅಂಕ ಗಳಿಸಿದೆ. ಆದರೆ ರನ್ ರೇಟ್ (+0.599) ಆಧಾರದಲ್ಲಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ.
ಇಶಾನ್ ಕಿಶನ್ ಸಾರಥ್ಯದ ಹೈದರಾಬಾದ್ ತಂಡ ಆಡಿದ 6 ಪಂದ್ಯಗಳಲ್ಲಿ 3 ಗೆಲುವು ದಾಖಲಿಸಿ 6 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.
ಅಕ್ಷರ್ ಪಟೇಲ್ ನಾಯಕತ್ವದ ಡೆಲ್ಲಿ ತಂಡ 5 ಪಂದ್ಯಗಳಲ್ಲಿ 3 ಗೆಲುವು ಕಂಡು 6 ಅಂಕಗಳೊಂದಿಗೆ ಐದನೇ ಸ್ಥಾನ ಪಡೆದುಕೊಂಡಿದೆ.
ಗುಜರಾತ್ ಟೈಟಾನ್ಸ್ (6), ಚೆನ್ನೈ ಸೂಪರ್ ಕಿಂಗ್ಸ್ (7), ಲಕ್ನೋ ಸೂಪರ್ ಜೈಂಟ್ಸ್ (8) ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ (9) ನಂತರದ ಸ್ಥಾನಗಳಲ್ಲಿವೆ. ಇನ್ನು ಆಘಾತಕಾರಿ ಎಂಬಂತೆ ಕೇವಲ ಒಂದು ಗೆಲುವು ಕಂಡಿರುವ ಮುಂಬೈ ಇಂಡಿಯನ್ಸ್ ಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.



