April 20, 2026
Monday, April 20, 2026
spot_img

ಬಿಸಿಲ ಬೇಗೆಗೆ ಉಸಿರು ಚೆಲ್ಲಿದ ಯುವಕ: ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾ*ವು

ಹೊಸದಿಗಂತ ವರದಿ ಬೀದರ್ :

ಕಳೆದ ಎರಡು ದಿನಗಳಿಂದ ರಾಜ್ಯದಲ್ಲಿ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದು ಕಂಡು ಬಂದಿದ್ದು, ಬೀದರ್‌ನಲ್ಲಿ ಮನೆಯಿಂದ ಹೊರಬರಲು ಆಗದಷ್ಟು ಬಿಸಿಲ ತಾಪಮಾನ ಹೆಚ್ಚಾಗಿದೆ. ಬಿಸಿಲಿನ ಝಳದ ಕಾರಣ ಕುಸಿದು ಬಿದ್ದು ಯುವಕನೋರ್ವ ಜಿಲ್ಲೆಯ ಕಮಲನಗರ ಪಟ್ಟಣದಲ್ಲಿ ಸಾವನ್ನಪ್ಪಿರುವ ಘಟನೆ ಪಟ್ಟಣದ ಹೊರವಲಯದ ಡಿಗ್ಗಿ ಗ್ರಾಮಕ್ಕೆ ತೆರಳುವ ರಾಷ್ಟ್ರೀಯ ಹೆದ್ದಾರಿ-50 ರಸ್ತೆ ಬಳಿ ನಡೆದಿದೆ.

ಮೃತ ಯುವಕ ಮೊಹ್ಮದ್ ಸಮೀರ ಲಯಿಕ್ ಅಹ್ಮದ್(20) ಕಮಲನಗರದಲ್ಲಿ ಸಲೂನ್‌ನಲ್ಲಿ ಕೆಲಸ ಮಾಡುತ್ತಿದ್ದನು ಎಂದು ತಿಳಿದುಬಂದಿದೆ, ಈತ ಉತ್ತರಪ್ರದೇಶ ಮೂಲದವನೆಂದು ಗೊತ್ತಾಗಿದೆ.

ಬಿಸಿಲಿನ ಝಳ ತಾಳಲಾರದೆ ಮಿರ್ಜಾಪುರ ಪಲ್ಲಾದ ನಿವಾಸಿ ಮಹ್ಮದ್ ಸಮೀರ ಮೆಕ್ಯಾನಿಕ್ ಅಂಗಡಿ ಬಳಿ ನೀರು ಕುಡಿದು, ತಲೆ ಸುತ್ತು ಬರುತ್ತಿದೆ ಎಂದು ಕೆಲ ಹೊತ್ತು ವಿಶ್ರಾಂತಿ ಪಡೆದಿದ್ದ. ನಂತರ ಡಿಗ್ಗಿ ಗ್ರಾಮದ ಕಡೆಗೆ ತೆರಳುತ್ತಿದ್ದಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾನೆ. ತಕ್ಷಣ ಸ್ಥಳೀಯರು ನೆರವಿಗೆ ಧಾವಿಸಿದರೂ, ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗಿದೆ.

ಇದನ್ನೂ ಓದಿ:

ಘಟನೆಯ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ತಾಪಮಾನ ಏರಿಕೆಯಾಗಿ ಹೀಟ್ ಸ್ಟ್ರೋಕ್ ಕಾರಣಕ್ಕೆ ಯುವಕ ಸಾವನ್ನಪ್ಪಿರಬಹುದೆಂದು ಶಂಕಿಸಲಾಗಿದೆ, ಮರಣೋತ್ತರ ಪರೀಕ್ಷೆಯ ವರದಿ ನಂತರ ನಿಖರ ಕಾರಣದ ಬಗ್ಗೆ ಗೊತ್ತಾಗಲಿದೆ.

ರಾಜ್ಯದಲ್ಲಿ ತಾಪಮಾನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಇಂತಹ ಘಟನೆಗಳು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಈ ನಡುವೆ ಸಾರ್ವಜನಿಕರು ಬಿಸಿಲಿನ ವೇಳೆ ಹೆಚ್ಚು ಎಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತ ಸಲಹೆ ನೀಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !