October 22, 2026
Thursday, October 22, 2026
spot_img

ಬಡವರ ಯೋಜನೆಗಳಿಗೆ ಹಣವಿಲ್ಲ, ಸಿಎಂ ಹಾರಾಟಕ್ಕೆ ಕೋಟಿ ಕೋಟಿ ಖರ್ಚು; ತನಿಖೆಗೆ ಆಗ್ರಹಿಸಿ ರಾಜ್ಯಪಾಲರಿಗೆ ಪತ್ರ

ಹೊಸದಿಗಂತ ವರದಿ ಬೆಳಗಾವಿ:

ಬಡವರ ಯೋಜನೆಗಳಿಗೆ ಹಣವಿಲ್ಲ, ಮಾಶಾಸನಗಳು ಸಕಾಲಕ್ಕೆ ಬರುತ್ತಿಲ್ಲ, ರಸ್ತೆ ದುರಸ್ತಿಗೂ ಅನುದಾನವಿಲ್ಲ. ಆದರೆ ಮುಖ್ಯಮಂತ್ರಿಗಳ ವಿಶೇಷ ವಿಮಾನ ಹಾಗೂ ಹೆಲಿಕಾಪ್ಟರ್ ಪ್ರಯಾಣಕ್ಕೆ ಬರೋಬ್ಬರಿ ₹116.55 ಕೋಟಿ ವೆಚ್ಚ ಮಾಡಲಾಗಿದೆ ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ಬಹಿರಂಗವಾಗಿದೆ. ಈ ವೆಚ್ಚದ ಕುರಿತು ತನಿಖೆ ನಡೆಸುವಂತೆ ಉತ್ತರ ಕರ್ನಾಟಕ ಹೋರಾಟ ಸಮಿತಿಯ ಗೌರವಾಧ್ಯಕ್ಷ ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ರಾಜ್ಯಪಾಲರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.

ಗುರುವಾರ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2018ರಿಂದ 2023ರವರೆಗಿನ ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರದ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿಗಳ ವಿಮಾನ ಪ್ರಯಾಣಕ್ಕೆ ₹53.38 ಕೋಟಿ ವೆಚ್ಚವಾಗಿದ್ದರೆ, 2023ರಿಂದ ಅಸ್ತಿತ್ವದಲ್ಲಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ₹63.16 ಕೋಟಿ ಪಾವತಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಸಾರ್ವಜನಿಕರ ತೆರಿಗೆ ಹಣದಲ್ಲಿ ಬಳಸಲಾದ ವಿಶೇಷ ವಿಮಾನಗಳನ್ನು ಖಾಸಗಿ ಅಥವಾ ಪಕ್ಷದ ಕಾರ್ಯಕ್ರಮಗಳಿಗೆ ಬಳಸಲಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಸಬೇಕು. ಅಂತಹ ಬಳಕೆ ದೃಢಪಟ್ಟರೆ ವೆಚ್ಚವನ್ನು ಸಂಬಂಧಪಟ್ಟವರಿಂದ ವಸೂಲಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಗ್ಯಾಸ್, ಹಾಲು, ತೈಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ಸಂಕಷ್ಟದಲ್ಲಿದ್ದಾರೆ. ಮಾಶಾಸನ ಅವಲಂಬಿತ ಕುಟುಂಬಗಳಿಗೆ ಹಣ ಸಕಾಲಕ್ಕೆ ತಲುಪುತ್ತಿಲ್ಲ. ಇಂತಹ ಸಂದರ್ಭದಲ್ಲಿ ವಿಮಾನ ಪ್ರಯಾಣಕ್ಕೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿರುವುದು ಸಾರ್ವಜನಿಕ ಹಣದ ಬಳಕೆಯ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ:

ವಿಮಾನ ಪ್ರಯಾಣದ ವಿವರಗಳನ್ನು ಲೋಕೋಪಯೋಗಿ ಇಲಾಖೆ ನೀಡದಿರುವುದರಿಂದ ಅನುಮಾನಗಳು ಮೂಡಿವೆ. ಈ ಕುರಿತು ಸಮಗ್ರ ತನಿಖೆಗೆ ರಾಜ್ಯಪಾಲರು ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಭೀಮಪ್ಪ ಗಡಾದ ಆಗ್ರಹಿಸಿದರು.

Must Read