ಹೊಸದಿಗಂತ ವರದಿ ಬೆಳಗಾವಿ:
ಕನ್ನಡ ನಾಡಿನ ಸ್ವಾತಂತ್ರ್ಯ ಸಂಗ್ರಾಮದ ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮಳ ಸಾಹಸ, ಶೌರ್ಯ ಮತ್ತು ದೇಶಪ್ರೇಮದ ಇತಿಹಾಸವನ್ನು ವಿಶ್ವದಾದ್ಯಂತ ಪಸರಿಸುವ ಉದ್ದೇಶದಿಂದ ಆಯೋಜಿಸಿರುವ ‘ಚೆನ್ನಮ್ಮನ ಕಿತ್ತೂರು ಉತ್ಸವ-2026’ಕ್ಕೆ ಅಕ್ಟೋಬರ್ 23ರಂದು ಚಾಲನೆ ದೊರೆಯಲಿದೆ.
ಕರ್ನಾಟಕ ಸರ್ಕಾರ, ಬೆಳಗಾವಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಅಕ್ಟೋಬರ್ 23, 24 ಮತ್ತು 25ರಂದು ಕಿತ್ತೂರು ಕೋಟೆ ಆವರಣದಲ್ಲಿ ಮೂರು ದಿನಗಳ ಕಾಲ ಉತ್ಸವ ನಡೆಯಲಿದೆ ಎಂದು ಶಾಸಕ ಬಾಬಾಸಾಹೇಬ ಪಾಟೀಲ ತಿಳಿಸಿದರು.
ಕಿತ್ತೂರು ಕೋಟೆ ಆವರಣದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ಸವದ ಕಾರ್ಯಕ್ರಮಗಳ ವಿವರಗಳನ್ನು ಹಂಚಿಕೊಂಡರು.

ಅ.23ರಂದು ಉತ್ಸವ ಉದ್ಘಾಟನೆ:
ಶುಕ್ರವಾರ ಸಂಜೆ 7 ಗಂಟೆಗೆ ಉತ್ಸವದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ರಾಜಯೋಗೀಂದ್ರ ಮಹಾಸ್ವಾಮಿಗಳು, ಪಂಚಾಕ್ಷರಿ ಮಹಾಸ್ವಾಮಿಗಳು ಹಾಗೂ ಬಸವ ಮೃತ್ಯುಂಜಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ರಾಜ್ಯ ರೈತ ಸಂಘದ ನಾಯಕಿ ಚುಕ್ಕಿ ನಂಜುಂಡಸ್ವಾಮಿ ಉದ್ಘಾಟಿಸಲಿದ್ದಾರೆ. ಬಳಿಕ ರಸಮಂಜರಿ, ಸಂಗೀತ, ವಚನ ಗಾಯನ, ಭಜನೆ, ತತ್ವಪದ ಹಾಗೂ ‘ರಾಯಣ್ಣ’ ರೂಪಕ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಮಹಿಳಾ ವಿಚಾರ ಸಂಕಿರಣ:
ಅಕ್ಟೋಬರ್ 24ರಂದು ‘ಕಿತ್ತೂರು ರಾಣಿ ಸಂಸ್ಥಾನ’ವಿಷಯದ ಕುರಿತು ರಾಜ್ಯಮಟ್ಟದ ಮಹಿಳಾ ವಿಚಾರ ಸಂಕಿರಣ ಆಯೋಜಿಸಲಾಗಿದೆ. ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಉದ್ಘಾಟಿಸಲಿದ್ದು, ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹಾಗೂ ಡಾ. ಸರಸ್ವತಿ ಭಗವತಿ ಪಾಲ್ಗೊಳ್ಳಲಿದ್ದಾರೆ. ಡಾ. ಕವಿತಾ ಕುಸಗಲ್ಲ ಆಶಯ ನುಡಿಗಳನ್ನಾಡಲಿದ್ದಾರೆ.
ಅಕ್ಟೋಬರ್ 25ರಂದು ರಾಜ್ಯಮಟ್ಟದ ವಿಚಾರ ಸಂಕಿರಣ ನಡೆಯಲಿದ್ದು, ಶಾಸಕ ಬಾಬಾಸಾಹೇಬ ಪಾಟೀಲ ಉದ್ಘಾಟಿಸಲಿದ್ದಾರೆ. ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ. ಸಂತೋಷ ಹಾನಗಲ್ಲ ಆಶಯ ನುಡಿಗಳನ್ನಾಡಲಿದ್ದಾರೆ. ಲೀಲಾವತಿ ಪ್ರಸಾದ್ ಹಾಗೂ ಶೀಲಾಧರ ಯಲ್ಲಪ್ಪ ಮುಗಳಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಅಂದು ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಶಾಸಕ ಲಕ್ಷ್ಮಣ ಸವದಿ ಹಾಗೂ ಸಚಿವ ಶಿವರಾಜ ತಂಗಡಗಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಮೊದಲ ಬಾರಿಗೆ ಜಾನುವಾರು ಜಾತ್ರೆ:
ಈ ಬಾರಿಯ ಉತ್ಸವದ ವಿಶೇಷ ಆಕರ್ಷಣೆಯಾಗಿ ಇದೇ ಮೊದಲ ಬಾರಿಗೆ ಜಾನುವಾರು ಜಾತ್ರೆ ಆಯೋಜಿಸಲಾಗಿದೆ. ವಿವಿಧ ತಳಿಗಳ ಎತ್ತು, ಹೋರಿ, ಆಕಳು ಹಾಗೂ ಎಮ್ಮೆಗಳು ಜಾತ್ರೆಯಲ್ಲಿ ಭಾಗವಹಿಸಲಿವೆ. ರೈತರು ಮತ್ತು ಪಶುಸಂಗೋಪನೆಯಲ್ಲಿ ತೊಡಗಿರುವವರಿಗೆ ಇದರಿಂದ ಅನುಕೂಲವಾಗಲಿದೆ. ಇದರೊಂದಿಗೆ ಕುಸ್ತಿ ಪಂದ್ಯಾವಳಿ ಹಾಗೂ ಗ್ರಾಮೀಣ ಕ್ರೀಡಾಕೂಟಗಳನ್ನೂ ಆಯೋಜಿಸಲಾಗಿದೆ.
ಇದನ್ನೂ ಓದಿ:
ಈ ವೇಳೆ ಉಪವಿಭಾಗಾಧಿಕಾರಿ ಪ್ರವೀಣ ಜೈನ, ಡಿವೈಎಸ್ಪಿ ಡಾ. ವೀರಯ್ಯ ಹಿರೇಮಠ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು ಸೇರಿದಂತೆ ಗಣ್ಯರು ಇತರರು ಉಪಸ್ಥಿತರಿದ್ದರು.



