ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಗಲಭೆ ಪ್ರಕರಣದ ಆರೋಪಿ ಜೆಎನ್‌ಯು ಮಾಜಿ ವಿದ್ಯಾರ್ಥಿ ಉಮರ್ ಖಾಲಿದ್ ಇಂದು ಜಾಮೀನು ನಿರಾಕರಿಸಿದ್ದ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆಹೋಗಿದ್ದು, ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಎನ್.ವಿ. ಅಂಜಾರಿಯಾ ಅವರಿದ್ದ ಪೀಠವು ಮರುಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿದೆ.
ಖಾಲಿದ್ ಪರ ವಾದ ಮಂಡಿಸಿದ ಕಪಿಲ್ ಸಿಬಲ್, ಆದೇಶವನ್ನು ಮರುಪರಿಶೀಲಿಸುವಂತೆ ಮನವಿ ಮಾಡಿದರು. ಆದರೆ ಸುಪ್ರೀಂ ಕೋರ್ಟ್, ಈ ಹಿಂದೆ ನೀಡಿದ್ದ ಆದೇಶದಲ್ಲಿ ಯಾವುದೇ ರೀತಿಯ ಲೋಪ ಇಲ್ಲ ಎಂದು ತಿಳಿಸಿದೆ.
ಮರುಪರಿಶೀಲನಾ ಅರ್ಜಿಯಲ್ಲಿ ನೀಡಿದ ದಾಖಲೆಗಳಲ್ಲಿ ಹಾಗೂ ಈ ಹಿಂದಿನ ತೀರ್ಪಿನಲ್ಲಿ ಬದಲಾವಣೆ ಮಾಡುವಂತಹ ಯಾವುದೇ ಸೂಕ್ತ ಕಾರಣಗಳಿಲ್ಲ ಎಂದು ಪೀಠ ತಿಳಿಸಿದೆ. ಈ ಮೂಲಕ ಐದು ವರ್ಷಗಳಿಂದ ಜೈಲಿನಲ್ಲಿರುವ ಉಮರ್ ಖಾಲಿದ್ ಗೆ ಸೆರೆವಾಸವೇ ಗತಿಯಾಗಿದೆ.
2020 ರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ನಡೆದ ಪ್ರತಿಭಟನೆ ಸಂದರ್ಭ ಈಶಾನ್ಯ ದೆಹಲಿಯಲ್ಲಿ ಕೋಮು ಗಲಭೆ ಸಂಭವಿಸಿತ್ತು. ಈ ವೇಳೆ 53 ಜನರು ಪ್ರಾಣ ಕಳೆದುಕೊಂಡಿದ್ದರು ಮತ್ತು ಹಲವಾರು ಗಾಯಗೊಂಡಿದ್ದರು. ಈ ಗಲಭೆಯ ಹಿಂದೆ ಉಮರ್ ಖಾಲಿದ್ ಕೈವಾಡ ಇದೆ ಎಂದು ದೆಹಲಿ ಪೊಲೀಸರು ಪ್ರಕರಣ ದಾಖಲಿಸಿದ್ದರು. 2020ರ ದೆಹಲಿ ಸೆಪ್ಟೆಂಬರ್ ನಲ್ಲಿ ಪೊಲೀಸರ ವಿಶೇಷ ದಳವು ಬಂಧಿಸಿತ್ತು.



