ಹೊಸದಿಗಂತ ವರದಿ, ಕಾಸರಗೋಡು:
ಇಸ್ರೇಲ್, ಅಮೇರಿಕಾ ಮತ್ತು ಇರಾನ್ ನಡುವಿನ ಯುದ್ಧದ ಕಾರ್ಮೋಡ ಇನ್ನೂ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ಇರಾನ್‌ನ ಬಂದಿರನಲ್ಲಿ ಸಿಲುಕಿಕೊಂಡಿರುವ ಹಡಗಿನಲ್ಲಿ ಆಹಾರ, ಕುಡಿಯುವ ನೀರು ಸಮರ್ಪಕವಾಗಿ ಲಭಿಸದೆ ಅದರಲ್ಲಿರುವ ಕಾಸರಗೋಡು ನಿವಾಸಿ ಸಹಿತ ಇತರ ಸಿಬ್ಬಂದಿ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ.
ಹಡಗಿನಲ್ಲಿ ನೀರು ಮತ್ತು ಆಹಾರ ಖಾಲಿಯಾಗತೊಡಗಿರುವ ನಿಟ್ಟಿನಲ್ಲಿ ಅದರ ಚೀಫ್ ಆಫೀಸರ್ ತಮ್ಮ ಸ್ವಂತ ಖರ್ಚಿನಲ್ಲಿ ಇರಾನ್‌ನಿಂದ ದೋಣಿಗಳ ಮೂಲಕ ಬರುತ್ತಿರುವ ಆಹಾರ ವಿತರಣೆಗಾರರಿಂದ ಅತ್ಯಲ್ಪ ಪ್ರಮಾಣದ ಆಹಾರ, ನೀರು ಖರೀದಿಸಿ ಒದಗಿಸುತ್ತಿದ್ದು, ಅದನ್ನೇ ಸೇವಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಹಡಗಿನಲ್ಲಿ ಸಿಲುಕಿಕೊಂಡಿರುವ ಕಾಸರಗೋಡು ಪೆರಿಯ ಪನ್ನಿಕುನ್ನು ನಾರಾಯಣ ನಿವಾಸದ ಎ.ಬಾಲಕೃಷ್ಣನ್ ಎಂಬವರ ಪುತ್ರ ವೈಷ್ಣವ್ ಪುಲ್ಲಾಯಿಕೋಡ್ ಸೇರಿದಂತೆ ಇತರ ಸಿಬ್ಬಂದಿಗಳು ಈ ಹಡಗಿನಲ್ಲಿ ಇದ್ದಾರೆಂದು ಮಾಹಿತಿ ಲಭಿಸಿದೆ.
ಇವರು ಸಿಲುಕಿಕೊಂಡಿರುವ ಸರಕು ಹಡಗು ಶಾರ್ಜಾ ಸಫಾದ ಅಬ್ದುಲ್ ಸಲಾಂ ಶಿಪ್ಪಿಂಗ್ ಎಂಎಲ್‌ಸಿ ಮಾಲಕತ್ವಕ್ಕೆ ಸೇರಿದ್ದಾಗಿದೆ. ಇದೇ ವೇಳೆ ಈ ಹಡಗು ಹಾನಿಯಾಗಿದ್ದು, ಅದರ ದುರಸ್ತಿ ಗೋಜಿಗೂ ಪ್ರಸ್ತುತ ಹಡಗಿನ ಕಂಪೆನಿಯವರು ಹೋಗಿಲ್ಲವೆಂದು ದೂರಲಾಗಿದೆ.
ಶಾರ್ಜಾ, ದುಬಾಯಿ ಮತ್ತು ಇರಾನ್‌ಗೆ ಸರಕುಗಳನ್ನು ಪೂರೈಸುವ ಹಡಗು ಇದಾಗಿದೆ. ಇದರಲ್ಲಿ ವೈಷ್ಣವ್ ಸಹಿತ 10 ಮಂದಿ ಭಾರತೀಯರು ನಾವಿಕರಾಗಿ ದುಡಿಯುತ್ತಿದ್ದಾರೆ. ಇದರ ಕ್ಯಾಪ್ಟನ್ ಶಿರಿಯಾ ಪ್ರಜೆಯಾಗಿದ್ದಾರೆ. ಈ ಹಡಗು ನಾಲ್ಕು ತಿಂಗಳ ಹಿಂದೆ ಇರಾನ್ ಬಂದರಿಗೆ ತಲುಪಿತ್ತು. ಅಲ್ಲಿ ಅದರ ಯಂತ್ರ ಕೈಕೊಟ್ಟು ಈಗಲೂ ಅಲ್ಲೇ ಉಳಿದುಕೊಂಡಿದೆ. ಈ ಹಡಗನ್ನು ದುರಸ್ತಿಗೊಳಿಸುವ ಸಕಾಲಿಕ ಕ್ರಮಗಳನ್ನು ಹಡಗಿನ ಸಂಸ್ಥೆ ಸರಿಯಾಗಿ ಆರಂಭಿಸಿಲ್ಲ.
ಪ್ರಸ್ತುತ ಹಡಗಿನಲ್ಲಿ ಸಿಲುಕಿಕೊಂಡಿರುವ ಪುತ್ರನನ್ನು ರಕ್ಷಿಸಿ ಊರಿಗೆ ತಲುಪಿಸುವಂತೆ ಕೋರಿ ವೈಷ್ಣವ್ ಅವರ ತಂದೆ ಬಾಲಕೃಷ್ಣನ್ ಅವರು ತಮ್ಮ ಸಂಬಂಧಿಕರಾದ ಡಾ.ಆರ್.ಕೆ.ನಾಯರ್‌ರ ಮೂಲಕ ಭಾರತೀಯ ವಿದೇಶಾಂಗ ಸಚಿವಾಲಯ, ಕೇಂದ್ರ ಸಚಿವ ಸುರೇಶ್ ಗೋಪಿ ಮತ್ತು ನೋರ್ಕಾಗೆ ಮನವಿ ಸಲ್ಲಿಸಿದ್ದಾರೆ. ಮಾತ್ರವಲ್ಲದೆ ಈ ಹಡಗಿನಲ್ಲಿ ದುಡಿಯುತ್ತಿರುವ ಸಿಬ್ಬಂದಿಗಳಿಗೆ ಕೆಲವು ತಿಂಗಳುಗಳಿಂದ ವೇತನವೂ ಲಭಿಸಿಲ್ಲವೆಂದು ತಿಳಿದುಬಂದಿದೆ.



