April 22, 2026
Wednesday, April 22, 2026
spot_img

ಪ್ರಧಾನಿ ಮೋದಿ ವಿರುದ್ಧ ಹೇಳಿಕೆ ಖರ್ಗೆ ಹಿರಿತನಕ್ಕೆ ಶೋಭೆ ತರುವಂತಹದಲ್ಲ: ಸಂಸದ ರಮೇಶ ಜಿಗಜಿಣಗಿ

ಹೊಸದಿಗಂತ ವರದಿ, ವಿಜಯಪುರ:

ಪ್ರಧಾನಿ ನರೇಂದ್ರ ಮೋದಿ ಅವರನ್ನು ಭಯೋತ್ಪಾದಕರಿಗೆ ಹೋಲಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಡೆ ಖಂಡನಾರ್ಹ. ಕೂಡಲೇ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಮೋದಿ ಹಾಗೂ ದೇಶದ ಸಮಸ್ತ ಜನತೆಗೆ ಕ್ಷಮೆಯಾಚಿಸಬೇಕು ಎಂದು ಸಂಸದ ರಮೇಶ ಜಿಗಜಿಣಗಿ ಒತ್ತಾಯಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿದ ಅವರು, ಕಾಂಗ್ರೆಸ್ ಪಕ್ಷದ ವರಿಷ್ಠರನ್ನು ಓಲೈಸಲು ಈ ರೀತಿ ಒಬ್ಬ ದೇಶದ ಹೆಮ್ಮೆಯ ಪ್ರಧಾನಿಯನ್ನೇ ಅವಮಾನಿಸಿ ಕೀಳು ಮಟ್ಟದ ಪದ ಪ್ರಯೋಗಿಸಿರುವುದು ಖರ್ಗೆ ಅವರ ಹಿರಿತನಕ್ಕೆ ಶೋಭೆ ತರುವಂತಹದಲ್ಲ. ಮಲ್ಲಿಕಾರ್ಜುನ ಖರ್ಗೆ ರಾಷ್ಟ್ರೀಯ ಪಕ್ಷದ ಅಧ್ಯಕ್ಷರು, ಒಂದು ಜವಾಬ್ದಾರಿಯುತ ಸ್ಥಾನದಲ್ಲಿರುವವರು, ದೇಶದ ಪ್ರಧಾನಿಯ ಬಗ್ಗೆ ಈ ರೀತಿ ಹೇಳಿಕೆ ನೀಡಿರುವುದು ಬಿಜೆಪಿ ಅಷ್ಟೇ ಅಲ್ಲದೇ, ಇಡೀ ಭಾರತೀಯರಿಗೆ ನೋವು ತರಿಸಿದೆ ಎಂದು ಹೇಳಿದರು.

ದೇಶದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿರುವ, ಭಯೋತ್ಪಾದಕರನ್ನು ದಮನಗೊಳಿಸಲು ದಿಟ್ಟ ಹೆಜ್ಜೆ ಇರಿಸುವ ಪ್ರಧಾನಿಯ ಬಗ್ಗೆಯೇ ಈ ರೀತಿ ಅಗೌರವ ತರುವ ಹೇಳಿಕೆ ನೀಡುವುದು ಯಾವ ಉದ್ದೇಶಕ್ಕಾಗಿ?, ಪ್ರಧಾನಿ ಇಡೀ ದೇಶದ ಪ್ರಧಾನಿ, ಪ್ರಧಾನಿ ಅವರನ್ನು ಭಯೋತ್ಪಾದಕರು ಎಂದು ಕರೆದಿರುವುದು ಒಂದು ದೊಡ್ಡ ಅಗೌರವ ಹಾಗೂ ಸಾಂವಿಧಾನಿಕ ಹುದ್ದೆಗೆ ತೋರಿದ ಅತ್ಯಂತ ಅಗೌರವವಾಗಿದೆ ಎಂದು ಟೀಕಿಸಿದರು.

ಪ್ರಪಂಚದಲ್ಲಿನ ಅಭಿವೃದ್ಧಿಶೀಲ ದೇಶಗಳೂ ಕೂಡ ನರೇಂದ್ರ ಮೋದಿ ಅವರಂತಹ ನಾಯಕತ್ವ ನಮ್ಮ ದೇಶಕ್ಕೂ ಬೇಕು ಎಂದು ಬಯಸಿದ್ದಾರೆ. ಆದರೆ ಇದೆಲ್ಲದರ ಅರಿವು ಇಲ್ಲದ ಖರ್ಗೆ ಅವರು ಬಾಯಿಗೆ ಬಂದ ಹಾಗೆ ಮಾತನಾಡುತ್ತಾರೆ. ಗುಜರಾಜ್ ಚುನಾವಣೆ ವೇಳೆ ಹತ್ತು ತಲೆಯ ರಾವಣನಿಗೆ ಮೋದಿಯವರನ್ನು ಖರ್ಗೆ ಹೋಲಿಸಿದ್ದರು. ಅಷ್ಟೇ ಅಲ್ಲ ಕರ್ನಾಟಕ ಚುನಾವಣೆ ವೇಳೆ ಕಲಬುರಗಿಯಲ್ಲಿ ಮೋದಿ ಅವರನ್ನು ವಿಷದ ಹಾವಿಗೆ ಹೋಲಿಸಿದ್ದರು. ಮತ್ತೊಂದು ಬಾರಿ ಮೋದಿ ಅವರು ಆಯ್ಕೆಯಾದರೆ ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯುವುದಿಲ್ಲ ಎಂದು ಸಂಸತ್ ಒಳಗೆ ಮಾತನಾಡುವಾಗ ಹೇಳಿದ್ದರು. ಈಗ ಭಯೋತ್ಪಾದಕ ಎಂದು ಕರೆದಿದ್ದಾರೆ. ಇದು ಸರಿಯಾದ ಬೆಳವಣಿಗೆ ಅಲ್ಲ ಎಂದು ಅವರು ಕಿಡಿಕಾರಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !