June 19, 2026
Friday, June 19, 2026
spot_img

ಹಸೆಮಣೆ ಏರಲು ಸಜ್ಜಾದ ಸ್ಯಾಂಡಲ್‌ವುಡ್ ನಟಿ ರೂಪಿಕಾ: ನಟಿಯ ಮನಗೆದ್ದ ವರನ ಹಿನ್ನೆಲೆ ಏನು ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕನ್ನಡ ಚಿತ್ರರಂಗ ಹಾಗೂ ಕಿರುತೆರೆಯ ಜನಪ್ರಿಯ ನಟಿ ರೂಪಿಕಾ ಸದ್ಯದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ತಮ್ಮ ಬಹುಕಾಲದ ಗೆಳೆಯ ಅಂಕಿತ್‌ಯೊಂದಿಗೆ ನಟಿಯ ವಿವಾಹ ನಿಶ್ಚಯವಾಗಿದ್ದು, ಇತ್ತೀಚೆಗಷ್ಟೇ ಹಿರಿಯರು ಮತ್ತು ಆಪ್ತರ ಸಮ್ಮುಖದಲ್ಲಿ ಇವರ ನಿಶ್ಚಿತಾರ್ಥದ ಕಾರ್ಯಕ್ರಮಗಳು ಸಂಭ್ರಮದಿಂದ ನೆರವೇರಿದೆ.

ಯಾರು ಈ ವರ ಅಂಕಿತ್?

ನಟಿ ರೂಪಿಕಾ ಮನಗೆದ್ದ ವರ ಅಂಕಿತ್ ಮೂಲತಃ ಬೆಂಗಳೂರಿನವರಾಗಿದ್ದು, ಕಳೆದ ಐದು ವರ್ಷಗಳಿಂದ ಕೆನಡಾದಲ್ಲಿ ನೆಲೆಸಿದ್ದಾರೆ. ಸದ್ಯ ಅವರು ಕೆನಡಾದ ಪ್ರಸಿದ್ಧ ‘ಇನ್ವೆಸ್ಕೋ’ ಸಂಸ್ಥೆಯಲ್ಲಿ ಟ್ಯಾಕ್ಸ್ ಸ್ಪೆಷಲಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವೃತ್ತಿಯಿಂದ ಫೈನಾನ್ಸ್ ಪ್ರೊಫೆಷನಲ್ ಆಗಿದ್ದರೂ, ಇವರಿಗೆ ಸಂಗೀತದಲ್ಲಿ ಅಪಾರ ಆಸಕ್ತಿಯಿದ್ದು ಮ್ಯೂಸಿಕ್ ಕಂಪೋಸರ್ ಆಗಿಯೂ ಗುರುತಿಸಿಕೊಂಡಿದ್ದಾರೆ.

ಮದುವೆ ಯಾವಾಗ?

ಲಭ್ಯವಾಗಿರುವ ಮಾಹಿತಿ ಪ್ರಕಾರ, ಈ ಜೋಡಿಯ ಅದ್ಧೂರಿ ಕಲ್ಯಾಣೋತ್ಸವ ಮುಂಬರುವ ಆಗಸ್ಟ್ ತಿಂಗಳಲ್ಲಿ ಬೆಂಗಳೂರಿನಲ್ಲೇ ಜರುಗಲಿದೆ. ಮದುವೆಯ ನಂತರ ನಟಿ ರೂಪಿಕಾ  ಪತಿಯೊಂದಿಗೆ ಕೆನಡಾದಲ್ಲೇ ನೆಲೆಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.  

ಇದನ್ನೂ ಓದಿ;

ಬಾಲನಟಿಯಿಂದ ಹಿಡಿದು ‘ಲಕ್ಷ್ಮೀ ನಿವಾಸ’ದವರೆಗೆ ರೂಪಿಕಾ ಜರ್ನಿ:

ರೂಪಿಕಾ ಚಿಕ್ಕ ವಯಸ್ಸಿನಲ್ಲೇ ‘ಬೆಳ್ಳಿಚುಕ್ಕಿ’, ‘ಬದುಕು’, ‘ಅವಳ ಮನೆ’ ಸೇರಿದಂತೆ 20ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಬಾಲನಟಿಯಾಗಿ ನಟಿಸಿದ್ದರು. ಎಸ್. ನಾರಾಯಣ್ ನಿರ್ದೇಶನದ ‘ಚೆಲುವಿನ ಚಿಲಿಪಿಲಿ’ ಚಿತ್ರದ ಮೂಲಕ ನಾಯಕಿಯಾಗಿ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದರು. ನಂತರ ‘ತೀರ್ಥರೂಪ’, ‘ಜಾಲಿಡೇಸ್’ ಮುಂತಾದ ಸಿನಿಮಾಗಳಲ್ಲಿ ನಟಿಸಿದರು. ನಂತರ ಕಲರ್ಸ್ ಕನ್ನಡದ ‘ದೊರೆಸಾನಿ’ ಸೀರಿಯಲ್ ಮೂಲಕ ಜನಪ್ರಿಯರಾದ ಇವರು, ಪ್ರಸ್ತುತ ಜೀ ಕನ್ನಡದ ಸೂಪರ್ ಹಿಟ್ ‘ಲಕ್ಷ್ಮೀ ನಿವಾಸ’ ಧಾರಾವಾಹಿಯಲ್ಲಿ ಖಡಕ್ ಸ್ವಭಾವದ ‘ಸಿಂಚನಾ’ ಪಾತ್ರದಲ್ಲಿ ನಟಿಸಿ ವೀಕ್ಷಕರ ಮನ ಗೆದ್ದಿದ್ದಾರೆ.

ಪ್ರತಿಭಾವಂತ ಭರತನಾಟ್ಯ ಕಲಾವಿದೆಯೂ ಆಗಿರುವ ಇವರು, ‘ಗೆಜ್ಜೆ ನೃತ್ಯ ಸ್ಟುಡಿಯೋ’ ಎಂಬ ನೃತ್ಯ ಶಾಲೆಯನ್ನು ಮುನ್ನಡೆಸುತ್ತಿದ್ದಾರೆ. ತಮ್ಮ ನೆಚ್ಚಿನ ನಟಿಯ ಹೊಸ ಜೀವನದ ಆರಂಭಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರು ಶುಭ ಹಾರೈಸುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !