October 15, 2026
Thursday, October 15, 2026
spot_img

ಗೃಹ ಸಚಿವ ಪರಮೇಶ್ವರ್‌ಗೆ ಬಿಗ್ ರಿಲೀಫ್: 500 ರೂ. ಬೆಟ್ಟಿಂಗ್ ಪ್ರಕರಣಕ್ಕೆ ಹೈಕೋರ್ಟ್ ತಡೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಬಡ್ಡಿ ಪಂದ್ಯದ ವೇಳೆ 500 ರೂಪಾಯಿ ಬೆಟ್ಟಿಂಗ್ ಕಟ್ಟಿದ ಆರೋಪ ಎದುರಿಸುತ್ತಿದ್ದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರಿಗೆ ಹೈಕೋರ್ಟ್‌ನಲ್ಲಿ ದೊಡ್ಡ ಸಮಾಧಾನ ಸಿಕ್ಕಿದೆ. ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನೀಡಿದ್ದ ಎಫ್‌ಐಆರ್ ದಾಖಲಿಸುವ ಆದೇಶಕ್ಕೆ ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಅವರ ಪೀಠವು ತಡೆಯಾಜ್ಞೆ ನೀಡಿದೆ.

2025ರಲ್ಲಿ ತುಮಕೂರಿನಲ್ಲಿ ನಡೆದ ಕಬಡ್ಡಿ ಟೂರ್ನಿಯಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರೊಂದಿಗೆ ಪರಮೇಶ್ವರ್ ತಮಾಷೆಗಾಗಿ 500 ರೂಪಾಯಿ ಬಾಜಿ ಕಟ್ಟಿದ್ದರು. ಪಂದ್ಯದ ನಂತರ ತಾನು ಬಾಜಿಯಲ್ಲಿ ಸೋತು ಹಣ ನೀಡಿರುವುದಾಗಿ ಅವರೇ ಬಹಿರಂಗವಾಗಿ ಹೇಳಿಕೊಂಡಿದ್ದರು. ಇದನ್ನು ಪ್ರಶ್ನಿಸಿ ಎಚ್.ಆರ್. ನಾಗಭೂಷಣ್ ಎಂಬುವರು ಖಾಸಗಿ ದೂರು ದಾಖಲಿಸಿದ್ದರು.

ಸಚಿವರ ಪರ ವಾದ ಆಲಿಸಿದ ಪೀಠವು, “ಕೇವಲ ತಮಾಷೆಗಾಗಿ ಆಡಿದ ಮಾತುಗಳಿಗೆ ತನಿಖೆಗೆ ಆದೇಶಿಸುವ ಮುನ್ನ ಪೊಲೀಸರಿಂದ ವಿವರಣೆ ಪಡೆಯಬೇಕಿತ್ತು” ಎಂದು ಅಭಿಪ್ರಾಯಪಟ್ಟಿದೆ. ಉದ್ದೇಶಪೂರ್ವಕವಾಗಿ ಕಾನೂನು ಉಲ್ಲಂಘನೆ ಮಾಡಿದಂತೆ ಕಾಣುತ್ತಿಲ್ಲ ಎಂದು ತಿಳಿಸಿದ ನ್ಯಾಯಾಲಯ, ವಿಚಾರಣೆಯನ್ನು ಮುಂದೂಡಿದೆ. ಈ ಮೂಲಕ ಎಸಿಜೆಎಂ ಕೋರ್ಟ್ ನೀಡಿದ್ದ ತನಿಖಾ ಆದೇಶಕ್ಕೆ ಬ್ರೇಕ್ ಬಿದ್ದಂತಾಗಿದೆ.

Must Read