ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಬೆನ್ನಲ್ಲೇ ಕೋಟೆನಾಡಿನಲ್ಲಿ ರಾಜಕೀಯ ಅಸಮಾಧಾನ ಸ್ಪೋಟಗೊಂಡಿದ್ದು, ಮೊಳಕಾಲ್ಮೂರು ಕ್ಷೇತ್ರದ ಹಿರಿಯ ಶಾಸಕ ಎನ್.ವೈ. ಗೋಪಾಲಕೃಷ್ಣಗೆ ಮಂತ್ರಿಗಿರಿ ಕೈತಪ್ಪಿರುವುದಕ್ಕೆ ಅವರ ಬೆಂಬಲಿಗರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ರಸ್ತೆ ಮಧ್ಯೆ ಟೈರ್ ಸುಟ್ಟು ಸಾರಿಗೆ ಬಸ್ ತಡೆ:
ಸಚಿವ ಸ್ಥಾನ ಸಿಗದಿದ್ದಕ್ಕೆ ತೀವ್ರ ಆಸಮಾಧಾನಗೊಂಡ ಕಾರ್ಯಕರ್ತರು ರಾಂಪುರ ಬಸ್ ನಿಲ್ದಾಣದ ಬಳಿ ಜಮಾಯಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ, ರಸ್ತೆ ಮಧ್ಯೆ ಟೈರ್‌ಗಳಿಗೆ ಬೆಂಕಿಯಿಟ್ಟು ಆಕ್ರೋಶದ ಜ್ವಾಲೆ ಎಬ್ಬಿಸಿದ ಪ್ರತಿಭಟನಾಕಾರರು, ಕೆಎಸ್‌ಆರ್‌ಟಿಸಿ ಸಾರಿಗೆ ಬಸ್‌ಗಳನ್ನು ತಡೆದು ಸಂಚಾರವನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸಿದರು.
ಪೆಟ್ರೋಲ್, ವಿಷದ ಬಾಟಲಿ ಪ್ರದರ್ಶಿಸಿ ಹೈಡ್ರಾಮಾ:
ಪ್ರತಿಭಟನೆಯು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಕೆಲ ಬೆಂಬಲಿಗರು ತಮ್ಮ ಕೈಯಲ್ಲಿ ವಿಷದ ಬಾಟಲಿ ಹಾಗೂ ಪೆಟ್ರೋಲ್ ಕ್ಯಾನುಗಳನ್ನು ಹಿಡಿದು ಸಾರ್ವಜನಿಕವಾಗಿ ಪ್ರದರ್ಶಿಸಿದರು. ಹಿರಿಯ ಮುಖಂಡರಾದ ಎನ್‌ವೈ ಗೋಪಾಲಕೃಷ್ಣ ಅವರಿಗೆ ತಕ್ಷಣವೇ ಮಂತ್ರಿಗಿರಿ ನೀಡಬೇಕು, ಇಲ್ಲದಿದ್ದರೆ ಇಲ್ಲೇ ವಿಷ ಸೇವಿಸುತ್ತೇವೆ ಹಾಗೂ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಹಠ ಹಿಡಿದು ಸ್ಥಳದಲ್ಲಿ ಆತಂಕ ಸೃಷ್ಟಿಸಿದರು.
ಇದನ್ನೂ ಓದಿ:
ಹಿರಿಯ ಶಾಸಕನಿಗೆ ವಂಚಿಸಲಾಗಿದೆ ಎಂದು ಆಕ್ರೋಶ:
ಗೋಪಾಲಕೃಷ್ಣ ಹಿರಿಯ ಮತ್ತು ಅನುಭವೀ ರಾಜಕಾರಣಿಯಾಗಿದ್ದು, ಈ ಬಾರಿಯ ಸಂಪುಟ ವಿಸ್ತರಣೆಯಲ್ಲಿ ಅವರಿಗೆ ಸೂಕ್ತ ಸ್ಥಾನಮಾನ ನೀಡಬೇಕಿತ್ತು. ಆದರೆ ಹೈಕಮಾಂಡ್ ಹಾಗೂ ರಾಜ್ಯ ನಾಯಕರು ಅವರಿಗೆ ವಂಚಿಸಿದ್ದಾರೆ ಎಂದು ಬೆಂಬಲಿಗರು ಕಿಡಿಕಾರಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಹರಸಾಹಸ ಪಡಬೇಕಾಯಿತು.



