ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಬೆನ್ನಲ್ಲೇ ಸಚಿವ ಸ್ಥಾನ ವಂಚಿತ ಹಿರಿಯ ಶಾಸಕರು ಮತ್ತು ಅವರ ಬೆಂಬಲಿಗರ ಆಕ್ರೋಶ ಭುಗಿಲೆದ್ದಿರುವ ಬೆನ್ನಲ್ಲೇ, ಆಂತರಿಕ ಭಿನ್ನಮತ ಶಮನಗೊಳಿಸಲು ಸರ್ಕಾರ ಮುಂದಾಗಿದೆ. ಈ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಅವರು ಮಹತ್ವದ ಹೇಳಿಕೆ ನೀಡಿದ್ದು, ಸದ್ಯ ಸಂಪುಟದಲ್ಲಿ ಖಾಲಿ ಉಳಿದಿರುವ ಮಹಿಳಾ ಕೋಟಾದ ಸಚಿವ ಸ್ಥಾನವನ್ನು ಆದಷ್ಟು ಶೀಘ್ರದಲ್ಲಿಯೇ ಭರ್ತಿ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ಅಸಮಾಧಾನಿತ ಶಾಸಕರ ಸಮಾಧಾನಕ್ಕೆ ಮುಂದು:
ವಿವಿಧ ಕ್ಷೇತ್ರಗಳ ಹಿರಿಯ ಶಾಸಕರಿಗೆ ಮಂತ್ರಿಗಿರಿ ಕೈತಪ್ಪಿದ್ದರಿಂದ ರಾಜ್ಯದ ಹಲವೆಡೆ ಕಾರ್ಯಕರ್ತರು ರಸ್ತೆಗಿಳಿದು ಆಕ್ರೋಶ ಹೊರಹಾಕುತ್ತಿದ್ದಾರೆ. ಈ ಬಂಡಾಯದ ಕಿಡಿಯನ್ನು ಶಮನಗೊಳಿಸಲು ಮುಂದಾಗಿರುವ ಸಚಿವ ಪ್ರಿಯಾಂಕ್ ಖರ್ಗೆ, ಯಾರಿಗೂ ಅನ್ಯಾಯವಾಗಲು ಬಿಡುವುದಿಲ್ಲ. ಹಿರಿಯರ ಅನುಭವವನ್ನು ಪಕ್ಷ ಮತ್ತು ಸರ್ಕಾರ ಸೂಕ್ತ ಸಮಯದಲ್ಲಿ ಬಳಸಿಕೊಳ್ಳಲಿದೆ. ಸದ್ಯದಲ್ಲೇ ಖಾಲಿ ಇರುವ ಸ್ಥಾನದ ಭರ್ತಿಯಾಗಲಿದೆ ಎಂದು ಅಸಮಾಧಾನಿತ ಶಾಸಕರಿಗೆ ಸಂದೇಶ ರವಾನಿಸಿದ್ದಾರೆ.
ಮಹಿಳಾ ಪ್ರಾತಿನಿಧ್ಯಕ್ಕೆ ಹೈಕಮಾಂಡ್ ಆದ್ಯತೆ:
ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯ ನೀಡುವ ನಿಟ್ಟಿನಲ್ಲಿ ಹೈಕಮಾಂಡ್ ಗಂಭೀರ ಚಿಂತನೆ ನಡೆಸಿದೆ. ಪ್ರಸ್ತುತ ಖಾಲಿ ಇರುವ ಸಚಿವ ಸ್ಥಾನಕ್ಕೆ ಮಹಿಳಾ ಶಾಸಕಿಯೊಬ್ಬರನ್ನು ನೇಮಕ ಮಾಡಲು ಪಕ್ಷದ ವಲಯದಲ್ಲಿ ಚರ್ಚೆಗಳು ಬಿರುಸಾಗಿವೆ. ಈ ಮೂಲಕ ಪಕ್ಷದ ಆಂತರಿಕ ಭಿನ್ನಮತವನ್ನು ತಡೆಯುವುದರ ಜತೆಗೆ ಮುಂಬರುವ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಮಹಿಳಾ ಮತದಾರರನ್ನು ಸೆಳೆಯಲು ಕೈ ನಾಯಕರು ಮಾಸ್ಟರ್ ಪ್ಲಾನ್ ರೂಪಿಸುತ್ತಿದ್ದಾರೆ.
ಗಾಯತ್ರಿ ಶಾಂತೇಗೌಡ ಹೆಸರು ಕೈಬಿಟ್ಟಿದ್ದಕ್ಕೆ ಸ್ಪಷ್ಟನೆ:
ಸಚಿವ ಸ್ಥಾನದ ರೇಸ್‌ನಲ್ಲಿದ್ದ ಗಾಯತ್ರಿ ಶಾಂತೇಗೌಡ ಅವರ ಹೆಸರು ಕೊನೆ ಕ್ಷಣದಲ್ಲಿ ಕೈತಪ್ಪಿರುವ ಕುರಿತು ಪ್ರತಿಕ್ರಿಯಿಸಿದ ಸಚಿವರು, ಹೆಸರು ಬಿಡಲು ಯಾವುದೇ ವಿಶೇಷ ಕಾರಣಗಳಿಲ್ಲ. ರಾಜಕೀಯ ಸಮೀಕರಣ ಹಾಗೂ ಕಾಂಬಿನೇಷನ್‌ಗಳಲ್ಲಿ ಕೊಂಚ ಏರುಪೇರಾಗಿರಬಹುದು. ಕ್ಯಾಬಿನೆಟ್ ರಚಿಸುವುದು ಸಂಪೂರ್ಣವಾಗಿ ಮುಖ್ಯಮಂತ್ರಿಗಳ ಪರಮಾಧಿಕಾರ ಹಾಗೂ ಹೈಕಮಾಂಡ್ ನಿರ್ಧಾರವಾಗಿದೆ ಎಂದು ಗೊಂದಲಗಳಿಗೆ ತೆರೆ ಎಳೆದರು.
ಇದನ್ನೂ ಓದಿ;
ಬಿಜೆಪಿ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ:
ಕಾಂಗ್ರೆಸ್ ಪಕ್ಷದಲ್ಲಿ ಮಹಿಳೆಯರಿಗೆ ಸೂಕ್ತ ಮೀಸಲಾತಿ ಹಾಗೂ ಗೌರವ ನೀಡುತ್ತಿಲ್ಲ ಎಂಬ ವಿರೋಧ ಪಕ್ಷಗಳ ಆರೋಪಕ್ಕೆ ತೀವ್ರ ಆಕ್ರೋಶ ಹೊರಹಾಕಿದ ಅವರು, ದೇಶದಲ್ಲಿ ಮಹಿಳೆಯರನ್ನು ಲೋಕಸಭಾ ಸ್ಪೀಕರ್, ಪ್ರಧಾನಿ ಹಾಗೂ ರಾಷ್ಟ್ರಪತಿ ಸ್ಥಾನದವರೆಗೆ ತಂದಿಟ್ಟ ಹೆಗ್ಗಳಿಕೆ ಕಾಂಗ್ರೆಸ್ ಪಕ್ಷದ್ದು. ಬಿಜೆಪಿ ನಾಯಕರು ಮನುವಾದಿಗಳು, ಅವರಿಂದ ನಾವು ಮಹಿಳಾ ಗೌರವದ ಬಗ್ಗೆ ಕಲಿಯುವ ಅಗತ್ಯವಿಲ್ಲ ಎಂದು ಕಿಡಿಕಾರಿದ್ದಾರೆ.



