ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ 2026ರ ಹಂಗಾಮು ಈಗ ಕುತೂಹಲದ ಘಟ್ಟ ತಲುಪಿದೆ. ಕೆಲವು ತಂಡಗಳು ಯುವ ಆಟಗಾರರ ಬಲದಿಂದ ಪುಟಿದೇಳುತ್ತಿದ್ದರೆ, ಇನ್ನು ಕೆಲವು ತಂಡಗಳಿಗೆ ಸ್ವತಃ ನಾಯಕರ ಫಾರ್ಮ್ ತಲೆನೋವಾಗಿ ಪರಿಣಮಿಸಿದೆ. ಸುಮಾರು 76.85 ಕೋಟಿ ರೂಪಾಯಿ ವ್ಯಯಿಸಿ ಖರೀದಿಸಿದ ಐದು ಪ್ರಮುಖ ತಂಡಗಳ ನಾಯಕರು ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಇದು ಕೇವಲ ಅವರ ವೈಯಕ್ತಿಕ ಪ್ರದರ್ಶನದ ಮೇಲಷ್ಟೇ ಅಲ್ಲದೆ, ತಂಡದ ಅಂಕ ಪಟ್ಟಿಯ ಸ್ಥಾನದ ಮೇಲೂ ಗಂಭೀರ ಪರಿಣಾಮ ಬೀರಿದೆ.
ಮುಂಬೈ ಇಂಡಿಯನ್ಸ್ ತಂಡದ ಸಾರಥ್ಯ ವಹಿಸಿರುವ ಹಾರ್ದಿಕ್ ಪಾಂಡ್ಯ ಅವರಿಗೆ ಈ ಸೀಸನ್ ಅಕ್ಷರಶಃ ಸವಾಲಾಗಿದೆ. 16.35 ಕೋಟಿ ರೂ. ಸಂಭಾವನೆ ಪಡೆಯುತ್ತಿರುವ ಇವರು, ಆಡಿರುವ ಆರು ಪಂದ್ಯಗಳಲ್ಲಿ ಕೇವಲ 19.4 ಸರಾಸರಿಯಂತೆ 97 ರನ್ ಗಳಿಸಿದ್ದಾರೆ. ಬೌಲಿಂಗ್ನಲ್ಲೂ ಕೇವಲ 3 ವಿಕೆಟ್ ಪಡೆದಿರುವ ಇವರ ಕಳಪೆ ಫಾರ್ಮ್ನಿಂದಾಗಿ ಮುಂಬೈ ತಂಡ ಅಂಕಪಟ್ಟಿಯಲ್ಲಿ 8ನೇ ಸ್ಥಾನಕ್ಕೆ ಕುಸಿದಿದೆ.
ಐಪಿಎಲ್ ಇತಿಹಾಸದ ಅತ್ಯಂತ ದುಬಾರಿ ಆಟಗಾರರಲ್ಲಿ ಒಬ್ಬರಾದ ರಿಷಭ್ ಪಂತ್ (27 ಕೋಟಿ ರೂ.), ಲಕ್ನೋ ತಂಡದ ನಾಯಕರಾಗಿ ಯಶಸ್ವಿಯಾಗುತ್ತಿಲ್ಲ. ಆಡಿರುವ ಏಳು ಪಂದ್ಯಗಳಲ್ಲಿ ಕೇವಲ ಒಂದು ಅರ್ಧಶತಕದ ನೆರವಿನಿಂದ 147 ರನ್ ಗಳಿಸಿರುವುದು ಅವರ ಫಾರ್ಮ್ ಮೇಲಿನ ಆತಂಕವನ್ನು ಹೆಚ್ಚಿಸಿದೆ. ಲಕ್ನೋ ತಂಡ 5 ಪಂದ್ಯಗಳಲ್ಲಿ ಸೋಲನುಭವಿಸಿ 9ನೇ ಸ್ಥಾನದಲ್ಲಿದೆ.
ಸಿಎಸ್ಕೆ ನಾಯಕ ರುತುರಾಜ್ ಗಾಯಕ್ವಾಡ್ ಫಾರ್ಮ್ ಕೊರತೆಯಿಂದ ಬಳಲುತ್ತಿದ್ದಾರೆ. 18 ಕೋಟಿ ರೂ. ಸಂಭಾವನೆ ಪಡೆಯುವ ಇವರು 7 ಪಂದ್ಯಗಳಿಂದ ಕೇವಲ 104 ರನ್ ಗಳಿಸಿದ್ದಾರೆ. ತಂಡಕ್ಕೆ ಭರ್ಜರಿ ಆರಂಭ ನೀಡುವಲ್ಲಿ ವಿಫಲರಾಗುತ್ತಿರುವುದು ತಂಡದ ಮಧ್ಯಮ ಕ್ರಮಾಂಕದ ಮೇಲೆ ಒತ್ತಡ ಹೇರುತ್ತಿದೆ.
ಯುವ ನಾಯಕ ರಿಯಾನ್ ಪರಾಗ್ (14 ಕೋಟಿ ರೂ.) ಬ್ಯಾಟಿಂಗ್ನಲ್ಲಿ ಅಸ್ಥಿರತೆ ತೋರುತ್ತಿದ್ದಾರೆ. ಆಡಿರುವ 7 ಪಂದ್ಯಗಳಲ್ಲಿ ಕೇವಲ 81 ರನ್ ಗಳಿಸಿದ್ದರೂ, ತಂಡದ ಇತರ ಆಟಗಾರರ ಸಾಂಘಿಕ ಪ್ರದರ್ಶನದಿಂದ ರಾಜಸ್ಥಾನ್ ರಾಯಲ್ಸ್ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಕಾಯ್ದುಕೊಂಡಿರುವುದು ಪರಾಗ್ಗೆ ಸದ್ಯದ ಸಮಾಧಾನಕರ ವಿಷಯ.
ಅಚ್ಚರಿಯ ನಾಯಕತ್ವದ ಆಯ್ಕೆಯಾಗಿದ್ದ ಅಜಿಂಕ್ಯ ರಹಾನೆ (1.5 ಕೋಟಿ ರೂ.), ಕೆಕೆಆರ್ ತಂಡವನ್ನು ಮುನ್ನಡೆಸುವಲ್ಲಿ ಹಾಗೂ ಬ್ಯಾಟಿಂಗ್ನಲ್ಲಿ ರನ್ ಗಳಿಸಲು ಪರದಾಡುತ್ತಿದ್ದಾರೆ. 7 ಪಂದ್ಯಗಳಲ್ಲಿ ಕೇವಲ 152 ರನ್ ಗಳಿಸಿರುವ ಇವರ ನಾಯಕತ್ವದಲ್ಲಿ ಕೆಕೆಆರ್ ಕೇವಲ ಒಂದು ಜಯದೊಂದಿಗೆ ಅಂಕಪಟ್ಟಿಯ ಕೊನೆಯ ಸ್ಥಾನದಲ್ಲಿದೆ.



