ಹೊಸದಿಗಂತ ಡಿಜಿಟಲ್ ಡೆಸ್ಕ್:
ಕುಟುಂಬದೊಳಗಿನ ಮಾನಸಿಕ ಒತ್ತಡ ಮತ್ತು ನಿರಂತರ ಕಟ್ಟುಪಾಡು ಯುವಕನೊಬ್ಬನ ಜೀವವನ್ನೇ ಕಸಿದುಕೊಂಡ ದಾರುಣ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.
23 ವರ್ಷದ ಯುವ ವಕೀಲ ಪ್ರಿಯಾಂಶು ಶ್ರೀವಾಸ್ತವ ನ್ಯಾಯಾಲಯದ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಸಾವಿಗೂ ಮುನ್ನ ಬರೆದಿಟ್ಟ ಡೆತ್‌ನೋಟ್ ಈಗ ಭಾರೀ ಚರ್ಚೆಗೆ ಕಾರಣವಾಗಿದೆ.
ಪ್ರತ್ಯಕ್ಷದರ್ಶಿಗಳ ಮಾಹಿತಿ ಪ್ರಕಾರ, ಘಟನೆಗೂ ಮುನ್ನ ಪ್ರಿಯಾಂಶು ಐದನೇ ಮಹಡಿಯಲ್ಲಿ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದರು. ಬಳಿಕ ಏಕಾಏಕಿ ಕೆಳಕ್ಕೆ ಜಿಗಿದಿದ್ದಾರೆ. ತೀವ್ರ ಗಾಯಗೊಂಡ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಸಾವಿಗೂ ಮುನ್ನ ಬರೆದ ಪತ್ರದಲ್ಲಿ ಬಾಲ್ಯದಿಂದಲೇ ತಾನು ಅನುಭವಿಸಿದ ಮಾನಸಿಕ ಒತ್ತಡ, ಅವಮಾನ ಮತ್ತು ತಂದೆಯ ನಿರಂತರ ಮೇಲ್ವಿಚಾರಣೆಯ ಬಗ್ಗೆ ಅವರು ನೋವು ಹಂಚಿಕೊಂಡಿದ್ದಾರೆ. ತಮ್ಮ ಆಸಕ್ತಿಗೆ ವಿರುದ್ಧವಾಗಿ ಶಿಕ್ಷಣದ ಆಯ್ಕೆ ಹೇರಿಕೆ ಮಾಡಲಾಗಿದೆ, ವೈಯಕ್ತಿಕ ಬದುಕಿನ ಪ್ರತಿಯೊಂದು ವಿಚಾರದಲ್ಲೂ ಹಸ್ತಕ್ಷೇಪ ನಡೆದಿದೆ ಎಂದು ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ:
“ನಾನು ಸೋತಿದ್ದೇನೆ, ಅಪ್ಪ ಗೆದ್ದಿದ್ದಾರೆ” ಎಂಬ ಸಾಲು ಪತ್ರದ ಕೇಂದ್ರಬಿಂದುವಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜೊತೆಗೆ ಮಕ್ಕಳ ಮೇಲೆ ಅತಿಯಾದ ಒತ್ತಡ ಹೇರಬೇಡಿ ಎಂದು ಎಲ್ಲಾ ಪೋಷಕರಿಗೂ ಮನವಿ ಮಾಡಿದ್ದಾರೆ. ಜೊತೆಗೆ ನನ್ನ ತಂದೆಗೆ ನನ್ನ ದೇಹವನ್ನು ಮುಟ್ಟಲು ಬಿಡಬೇಡಿ. ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದು ಬೇಡ, ಇದರಿಂದ ನನ್ನ ಕುಟುಂಬ ಕಷ್ಟ ಎದುರಿಸುವುದನ್ನು ನಾನು ಬಯಸುವುದಿಲ್ಲ ಎಂದು ಬರೆದಿದ್ದಾರೆ.
ಈ ಘಟನೆ ಪೋಷಕರು ಮತ್ತು ಮಕ್ಕಳ ನಡುವಿನ ಸಂಬಂಧ, ಮಾನಸಿಕ ಆರೋಗ್ಯ ಹಾಗೂ ಕುಟುಂಬದೊಳಗಿನ ಒತ್ತಡದ ಕುರಿತು ಹೊಸ ಚರ್ಚೆಗೆ ನಾಂದಿ ಹಾಡಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.



