June 25, 2026
Thursday, June 25, 2026
spot_img

ಪೀಕ್ ಅವರ್ಸ್‌ನಲ್ಲೇ ಕೈಕೊಟ್ಟ ನಮ್ಮ ಮೆಟ್ರೋ: ತಾಂತ್ರಿಕ ದೋಷದಿಂದ ನೇರಳೆ ಮಾರ್ಗದಲ್ಲಿ ಸಂಚಾರ ಅಸ್ತವ್ಯಸ್ತ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ರಾಜಧಾನಿ ಬೆಂಗಳೂರಿನ ಐಟಿ ಉದ್ಯೋಗಿಗಳು ಹಾಗೂ ದೈನಂದಿನ ಪ್ರಯಾಣಿಕರ ನೆಚ್ಚಿನ ಸಾರಿಗೆಯಾಗಿರುವ ‘ನಮ್ಮ ಮೆಟ್ರೋ’ ಇಂದು ಮತ್ತೆ ತಾಂತ್ರಿಕ ದೋಷದಿಂದಾಗಿ ಕೈಕೊಟ್ಟಿದೆ. ಮೆಟ್ರೋ ರೈಲಿನ ಬಾಗಿಲು ಲಾಕ್ ಆಗದ ಹಿನ್ನೆಲೆಯಲ್ಲಿ ರೈಲು ನಿಂತಲ್ಲೇ ನಿಂತಿದ್ದು, ಕಚೇರಿ ಹಾಗೂ ಮನೆಗಳಿಗೆ ತೆರಳುತ್ತಿದ್ದ ಸಾವಿರಾರು ಪ್ರಯಾಣಿಕರು ಮೆಟ್ರೋ ನಿಲ್ದಾಣಗಳಲ್ಲೇ ಸಿಲುಕಿ ಪರದಾಡಿದ್ದಾರೆ.

ಸ್ವಯಂಚಾಲಿತ ಬಾಗಿಲು ಲಾಕ್ ಆಗದೇ ತಾಂತ್ರಿಕ ದೋಷ!

ನೇರಳೆ ಮಾರ್ಗದಲ್ಲಿ ಚಲಿಸುತ್ತಿದ್ದ ಮೆಟ್ರೋ ರೈಲು ಕಬ್ಬನ್ ಪಾರ್ಕ್ ನಿಲ್ದಾಣಕ್ಕೆ ಬಂದು ಪ್ರಯಾಣಿಕರನ್ನು ಹತ್ತಿಸಿಕೊಂಡ ನಂತರ, ಅದರ ಆಟೋಮ್ಯಾಟಿಕ್ ಬಾಗಿಲುಗಳು ಮುಚ್ಚಿಕೊಳ್ಳಲು ನಿರಾಕರಿಸಿವೆ. ತಾಂತ್ರಿಕ ಸಿಬ್ಬಂದಿ ಬಾಗಿಲನ್ನು ಲಾಕ್ ಮಾಡಲು ತಕ್ಷಣವೇ ಪ್ರಯತ್ನ ನಡೆಸಿದರಾದರೂ ಯಶಸ್ವಿಯಾಗಲಿಲ್ಲ. ಭದ್ರತೆಯ ದೃಷ್ಟಿಯಿಂದ ಬಾಗಿಲು ಸಂಪೂರ್ಣ ಲಾಕ್ ಆಗದ ಹೊರತು ರೈಲು ಮುಂದೆ ಚಲಿಸುವುದಿಲ್ಲ. ಹೀಗಾಗಿ ರೈಲು ಹಳಿ ಮೇಲೆಯೇ ನಿಲ್ಲುವಂತಾಯಿತು.

ನಿಲ್ದಾಣಗಳಲ್ಲಿ ಜನಜಂಗುಳಿ; ಕರಗದ ಟ್ರಾಫಿಕ್ ಕ್ಯೂ!

ಪೀಕ್ ಅವರ್ಸ್ ಅಂದರೆ ಕಚೇರಿ ಅವಧಿಯ ಸಮಯದಲ್ಲಿ ಈ ದೋಷ ಸಂಭವಿಸಿದ್ದರಿಂದ ಮೆಟ್ರೋ ನಿಲ್ದಾಣಗಳಲ್ಲಿ ಜನವೋ ಜನ ತುಂಬಿ ತುಳುಕುತ್ತಿದ್ದರು. ಒಂದೇ ಮಾರ್ಗದಲ್ಲಿ ರೈಲು ನಿಂತಿದ್ದರಿಂದ, ಅದರ ಹಿಂದಿನಿಂದ ಬರುತ್ತಿದ್ದ ಇತರ ಮೆಟ್ರೋ ರೈಲುಗಳ ಸಂಚಾರವೂ ಸಂಪೂರ್ಣ ವ್ಯತ್ಯಯವಾಯಿತು. ಇತ್ತೀಚಿನ ದಿನಗಳಲ್ಲಿ ನಮ್ಮ ಮೆಟ್ರೋದಲ್ಲಿ ಪದೇ ಪದೇ ಇಂತಹ ತಾಂತ್ರಿಕ ದೋಷಗಳು ಮತ್ತು ಸಿಗ್ನಲಿಂಗ್ ಸಮಸ್ಯೆಗಳು ಉಂಟಾಗುತ್ತಿರುವುದಕ್ಕೆ ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಬಿಎಂಆರ್‌ಸಿಎಲ್ ವಿರುದ್ಧ ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ.

ಇದನ್ನೂ ಓದಿ:

ಯಥಾಸ್ಥಿತಿಗೆ ಬಂದ ಮೆಟ್ರೋ

ಘಟನೆ ಸಂಭವಿಸುತ್ತಿದ್ದಂತೆ ಎಚ್ಚೆತ್ತ ಮೆಟ್ರೋ ತಾಂತ್ರಿಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಬಾಗಿಲು ಲಾಕ್ ಆಗದಿರುವ ಸಮಸ್ಯೆಯನ್ನು ಸರಿಪಡಿಸುವ ಕಾರ್ಯದಲ್ಲಿ ತೊಡಗಿದರು. ಸಿಬ್ಬಂದಿ ಕಾರ್ಯಚರಣೆ ಬಳಿಕ ಸದ್ಯ ಡೋರ್ ಲಾಕ್ ಸಮಸ್ಯೆಯನ್ನು ಯಶಸ್ವಿಯಾಗಿ ಸರಿಪಡಿಸಲಾಗಿದ್ದು, ವೈಟ್​ಫೀಲ್ಡ್-ಚಲ್ಲಘಟ್ಟ ನೇರಳೆ ಮಾರ್ಗದಲ್ಲಿ ಸಂಚಾರ ಪುನಾರಂಭವಾಗಿದೆ. ಪ್ರಸ್ತುತ ನೇರಳೆ ಮಾರ್ಗದಲ್ಲಿ ಮೆಟ್ರೋ ಸಂಚಾರವನ್ನು ಯಥಾಸ್ಥಿತಿಗೆ ಬಂದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !