ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದ ರಾಜಧಾನಿ ವಾಷಿಂಗ್ಟನ್‌ನಲ್ಲಿ ನಡೆದ ಪ್ರಮುಖ ಕಾರ್ಯಕ್ರಮವೊಂದು ಗುಂಡಿನ ಸದ್ದಿನಿಂದ ಕ್ಷಣಾರ್ಧದಲ್ಲೇ ಆತಂಕದ ಮನೆಯಾಗಿ ಮಾರ್ಪಟ್ಟಿತು. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾಗವಹಿಸಿದ್ದ ಗಣ್ಯರ ಸಭೆಯ ಸಮೀಪ ನಡೆದ ಈ ಘಟನೆ ಭದ್ರತಾ ವಲಯದಲ್ಲಿ ಸಂಚಲನ ಮೂಡಿಸಿದ್ದು, ಸೀಕ್ರೆಟ್ ಸರ್ವಿಸ್ ತಕ್ಷಣ ಕಾರ್ಯಪ್ರವೃತ್ತರಾಗಿ ಟ್ರಂಪ್ ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದಿತು. ಈ ಘಟನೆಯನ್ನು ಭಾರತ ಪ್ರಧಾನಿ ನರೇಂದ್ರ ಮೋದಿ ತೀವ್ರವಾಗಿ ಖಂಡಿಸಿದ್ದಾರೆ.
ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಮೋದಿ, ಟ್ರಂಪ್, ಪ್ರಥಮ ಮಹಿಳೆ ಮತ್ತು ಉಪಾಧ್ಯಕ್ಷರು ಸುರಕ್ಷಿತರಾಗಿದ್ದಾರೆ ಎಂಬ ಮಾಹಿತಿ ಸಮಾಧಾನ ತಂದಿದೆ ಎಂದು ತಿಳಿಸಿದ್ದಾರೆ. ಜೊತೆಗೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಿಂಸಾಚಾರಕ್ಕೆ ಯಾವತ್ತೂ ಅವಕಾಶ ಇರಬಾರದು ಎಂದು ಸ್ಪಷ್ಟ ಸಂದೇಶ ನೀಡಿದ್ದಾರೆ.
ಭದ್ರತಾ ತಪಾಸಣಾ ವಲಯದ ಬಳಿ ಶಂಕಿತ ವ್ಯಕ್ತಿ ಗುಂಡು ಹಾರಿಸಿದ್ದರಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ತಕ್ಷಣ ಎಚ್ಚೆತ್ತ ಭದ್ರತಾ ಸಿಬ್ಬಂದಿ ಆರೋಪಿಯನ್ನು ವಶಕ್ಕೆ ಪಡೆದಿದ್ದು, ಘಟನೆಯಲ್ಲಿ ಒಬ್ಬ ಅಧಿಕಾರಿಗೆ ಗುಂಡು ತಗುಲಿದರೂ ಬುಲೆಟ್‌ಪ್ರೂಫ್ ಜಾಕೆಟ್‌ನಿಂದ ಅಪಾಯ ತಪ್ಪಿದೆ ಎಂದು ತಿಳಿದುಬಂದಿದೆ.
ಈ ಘಟನೆಯ ಬಳಿಕ ಶ್ವೇತಭವನ ಸೇರಿದಂತೆ ಪ್ರಮುಖ ಸರ್ಕಾರಿ ಕಟ್ಟಡಗಳ ಸುತ್ತ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.



