April 26, 2026
Sunday, April 26, 2026
spot_img

ಭಾರತದ ದೃಶ್ಯ ಇತಿಹಾಸ ಸೆರೆಹಿಡಿದ ಕಣ್ಣುಗಳು ಸ್ಥಬ್ಧ: ಖ್ಯಾತ ಛಾಯಾಗ್ರಾಹಕ ರಘು ರೈ ವಿಧಿವಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕತೆಯ ಅನೇಕ ಅಪರೂಪದ ಕ್ಷಣಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದ ಖ್ಯಾತ ಛಾಯಾಗ್ರಾಹಕ ರಘು ರೈ ಇಹಲೋಕ ತ್ಯಜಿಸಿದ್ದಾರೆ.

ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಭಾನುವಾರ ಮುಂಜಾನೆ ಕೊನೆಯುಸಿರೆಳೆದರು. ಅವರಿಗೆ 83 ವರ್ಷ ವಯಸ್ಸಾಗಿತ್ತು. ಅವರ ಅಗಲಿಕೆ ಭಾರತೀಯ ಛಾಯಾಗ್ರಹಣ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ.

ಕಳೆದ ಕೆಲವು ವರ್ಷಗಳಿಂದ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದ ರಘು ರೈ ಅವರಿಗೆ ಮೊದಲು ಪ್ರೋಸ್ಟೇಟ್ ಕ್ಯಾನ್ಸರ್ ಕಾಣಿಸಿಕೊಂಡಿತ್ತು. ಚಿಕಿತ್ಸೆ ಬಳಿಕ ಚೇತರಿಸಿಕೊಂಡರೂ ಬಳಿಕ ಕಾಯಿಲೆ ದೇಹದ ಇತರೆ ಭಾಗಗಳಿಗೆ ಹರಡಿತ್ತು. ಇತ್ತೀಚೆಗೆ ಮೆದುಳಿಗೂ ಸೋಂಕು ತಗುಲಿದ್ದ ಕಾರಣ ಆರೋಗ್ಯ ಮತ್ತಷ್ಟು ಹದಗೆಟ್ಟಿತ್ತು ಎಂದು ಕುಟುಂಬದವರು ತಿಳಿಸಿದ್ದಾರೆ.

ಇದನ್ನೂ ಓದಿ:

1942ರಲ್ಲಿ ಜನಿಸಿದ ರಘು ರೈ, 1960ರ ದಶಕದಲ್ಲಿ ಛಾಯಾಗ್ರಹಣ ಕ್ಷೇತ್ರಕ್ಕೆ ಕಾಲಿಟ್ಟು ಶೀಘ್ರದಲ್ಲೇ ತಮ್ಮದೇ ವಿಶಿಷ್ಟ ಶೈಲಿಯಿಂದ ಗುರುತಿಸಿಕೊಂಡರು. ‘ದಿ ಸ್ಟೇಟ್ಸ್‌ಮನ್’ ಹಾಗೂ ನಂತರ ‘ಇಂಡಿಯಾ ಟುಡೇ’ಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ದೇಶದ ಹಲವು ಮಹತ್ವದ ಘಟನೆಗಳನ್ನು ಅವರು ತಮ್ಮ ಲೆನ್ಸ್‌ನಲ್ಲಿ ಬಂಧಿಸಿದ್ದರು. ಭೋಪಾಲ್ ಅನಿಲ ದುರಂತ, ರಾಜಕೀಯ ಬೆಳವಣಿಗೆಗಳು, ಗ್ರಾಮೀಣ ಭಾರತದ ಬದುಕು ಹಾಗೂ ಸಾಮಾನ್ಯ ಜನರ ಭಾವನೆಗಳನ್ನು ಅವರು ಜೀವಂತವಾಗಿ ಚಿತ್ರಿಸಿದ್ದರು.

ರಘು ರೈ ಅವರ ಅಗಲಿಕೆಯಿಂದ ಕ್ಯಾಮೆರಾ ಹಿಂದೆ ನಿಂತ ಮಹಾನ್ ಕಲಾವಿದರೊಬ್ಬರ ಅಧ್ಯಾಯ ಮುಕ್ತಾಯಗೊಂಡರೂ, ಅವರು ಸೆರೆಹಿಡಿದ ದೃಶ್ಯಗಳು ಭಾರತದ ನೆನಪುಗಳಲ್ಲಿ ಶಾಶ್ವತವಾಗಿ ಉಳಿಯಲಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !