July 5, 2026
Sunday, July 5, 2026
spot_img

ಕೇತನ್ ಅಗರ್ವಾಲ್ ಹ*ತ್ಯೆಯ ಬೆನ್ನಲ್ಲೇ ಮತ್ತೊಂದು ಆಘಾತ: ಮೊಮ್ಮಗನ ಸಾ*ವಿನ ನೋವಿಗೆ ತಾತ ಬಲಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮಹಾರಾಷ್ಟ್ರದ ಪುಣೆ ಬಳಿಯ ಲೋಹಗಢ ಕೋಟೆಯಿಂದ ತಳ್ಳಿ ಯುವಕ ಕೇತನ್ ಅಗರ್ವಾಲ್‌ನನ್ನು ಕೊಲೆ ಮಾಡಿದ ಭೀಕರ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ದುಃಖದ ಸಂಗತಿ ಬೆಳಕಿಗೆ ಬಂದಿದೆ. ಮೊಮ್ಮಗನ ಅಕಾಲಿಕ ಮರಣದ ಆಘಾತವನ್ನು ತಡೆದುಕೊಳ್ಳಲು ಸಾಧ್ಯವಾಗದೆ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ತಾತ ದೇವೀಚಂದ್ ಅಗರ್ವಾಲ್ (71) ಶನಿವಾರ ರಾತ್ರಿ 9:45 ಕ್ಕೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಜೂನ್ 18 ರಂದು ನಡೆದಿದ್ದ ಮೊಮ್ಮಗನ ನಿಗೂಢ ಹತ್ಯೆಯ ನಂತರ ಅವರು ಸಂಪೂರ್ಣವಾಗಿ ಕುಗ್ಗಿಹೋಗಿದ್ದರು ಎಂದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಕೊಲೆಯ ಮಾಸ್ಟರ್ ಪ್ಲಾನ್: ಮೈದಾನದಲ್ಲಿ ನಡೆದಿತ್ತು ರಿಹರ್ಸಲ್!

ಲೋನಾವಾಲಾ ಗ್ರಾಮಾಂತರ ಪೊಲೀಸರ ತನಿಖೆಯ ವೇಳೆ ಕೇತನ್ ಅಗರ್ವಾಲ್ ಸಾವು ಆಕಸ್ಮಿಕವಲ್ಲ, ಅದೊಂದು ವ್ಯವಸ್ಥಿತ ಕೊಲೆ ಎಂಬ ಆಘಾತಕಾರಿ ಸತ್ಯ ಹೊರಬಿದ್ದಿದೆ. ಕೇತನ್ ಅಗರ್ವಾಲ್‌ರೊಂದಿಗೆ ನಿಶ್ಚಿತಾರ್ಥವಾಗಿದ್ದ ಮುಖ್ಯ ಆರೋಪಿ ಸಿಬಾ ಗೋಯಲ್, ತನಗೆ ಈ ವಯಸ್ಸಿನಲ್ಲಿ ಮದುವೆ ಇಷ್ಟವಿರಲಿಲ್ಲ ಎಂದು ತಿಳಿಸಿದ್ದಾಳೆ. ಕುಟುಂಬದ ಒತ್ತಡಕ್ಕೆ ಮಣಿದು ಆಕೆ ಮದುವೆಗೆ ಒಪ್ಪಿಕೊಂಡಿದ್ದರೂ, ಕೇತನ್‌ನನ್ನು ಮುಗಿಸಲು ಸಂಚು ರೂಪಿಸಿದ್ದಳು.

ಪುಣೆ ಗ್ರಾಮಾಂತರ ಪೊಲೀಸರು ಆರೋಪಿ ಸಿಬಾ ಗೋಯಲ್ಳನ್ನು ಪುಣೆ ನಗರದ ಲುಲ್ಲಾನಗರದ ಮುಕ್ತ ಮೈದಾನಕ್ಕೆ ಕರೆದೊಯ್ದು ತನಿಖೆ ನಡೆಸಿದ್ದಾರೆ. ಅಲ್ಲಿ ಆಕೆ ಮತ್ತು ಸಹ ಆರೋಪಿ ಚೇತನ್ ಚೌಧರಿ ಸೇರಿ, ಕೇತನ್‌ನನ್ನು ಲೋಹಗಢ ಕೋಟೆಯಿಂದ ಕೆಳಗೆ ತಳ್ಳುವುದು ಹೇಗೆ ಎಂಬುದರ ಬಗ್ಗೆ ಮುಂಚಿತವಾಗಿಯೇ ತಾಲೀಮು ನಡೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:

ಮುಂದುವರಿದ ತನಿಖೆ

ಪೊಲೀಸರು ಆರೋಪಿ ಸಿಬಾ ಗೋಯಲ್ ಮನೆಗೆ ಭೇಟಿ ನೀಡಿ, ಘಟನೆ ನಡೆದ ದಿನ ಆಕೆ ಧರಿಸಿದ್ದ ಬಟ್ಟೆಗಳನ್ನು ವಶಪಡಿಸಿಕೊಂಡಿದ್ದಾರೆ. ಈ ವೇಳೆ ಸುಮಾರು 30 ರಿಂದ 45 ನಿಮಿಷಗಳ ಕಾಲ ಪೊಲೀಸರು ಮನೆಯಲ್ಲಿದ್ದರು ಎಂದು ಆಕೆಯ ತಂದೆ ಪ್ರವೀಣ್ ಗೋಯಲ್ ತಿಳಿಸಿದ್ದಾರೆ.

ಪೊಲೀಸರು ಮನೆಗೆ ಬಂದು ತಮ್ಮ ಕೆಲಸ ಮುಗಿಸಿಕೊಂಡು ಹೋದರು. ನನ್ನ ಆರೋಗ್ಯ ಸರಿ ಇಲ್ಲದ ಕಾರಣ ವೈದ್ಯರು ವಿಶ್ರಾಂತಿ ಪಡೆಯಲು ಹೇಳಿದ್ದಾರೆ. ನನಗೆ ಈ ಪ್ರಕರಣದ ಬಗ್ಗೆ ಮಾತನಾಡುವ ಶಕ್ತಿಯಾಗಲಿ, ತಾಳ್ಮೆಯಾಗಲಿ ಇಲ್ಲ. ಪೊಲೀಸರು ನನ್ನನ್ನು ಏನೂ ಪ್ರಶ್ನಿಸಿಲ್ಲ”ಎಂದು ಪ್ರವೀಣ್ ಗೋಯಲ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !