ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ಅಯೋಧ್ಯೆಯ ಶ್ರೀರಾಮ ಮಂದಿರದ ದೇಣಿಗೆ ಹಣ ದುರುಪಯೋಗ ಪ್ರಕರಣದಲ್ಲಿ ವಿಶೇಷ ತನಿಖಾ ತಂಡಕ್ಕೆ (SIT) ಮಹತ್ವದ ಹೊಸ ಪುರಾವೆಗಳು ಲಭ್ಯವಾಗಿವೆ. ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಅವಿನಾಶ್ ಶುಕ್ಲಾ ಎಂಬಾತ ನಡೆಸಿರುವ 15 ಲಕ್ಷ ರೂಪಾಯಿಗೂ ಅಧಿಕ ಮೊತ್ತದ ಹಣದ ವಹಿವಾಟಿನ ಸಂಪೂರ್ಣ ವಿವರಗಳನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.
ಆರೋಪಿಯು ಈ ಹಣವನ್ನು ಹಲವು ವ್ಯಕ್ತಿಗಳಿಗೆ ಬ್ಯಾಂಕ್ ಮೂಲಕ ವರ್ಗಾವಣೆ ಮಾಡಿದ್ದು, ಇನ್ನು ಕೆಲವರಿಗೆ ನಗದು ರೂಪದಲ್ಲಿ ನೀಡಿದ್ದಾನೆ. ಈ ಹಣವು ಮಂದಿರದಿಂದ ಕದ್ದ ದೇಣಿಗೆಯೇ ಎಂಬುದರ ಕುರಿತು ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ.
ತನಿಖೆಯಿಂದ ಹೊರಬಿದ್ದ ಆಘಾತಕಾರಿ ಸತ್ಯಗಳು
ಆರೋಪಿ ಅವಿನಾಶ್ ಶುಕ್ಲಾ ಮಂದಿರದ ಹಣದಿಂದ ತನ್ನ ಮಹಿಳಾ ಸ್ನೇಹಿತೆಯೊಬ್ಬಳಿಗೆ ಸುಮಾರು 2 ಲಕ್ಷ ರೂಪಾಯಿ ನಗದು ಮತ್ತು ಅತ್ಯಂತ ದುಬಾರಿ ಮೊಬೈಲ್ ಫೋನ್ ಅನ್ನು ಉಡುಗೊರೆಯಾಗಿ ನೀಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಅವಿನಾಶ್ ತನ್ನ ಶಿಫ್ಟ್ ಮುಗಿದ ನಂತರ ಯೋಗ ಕೇಂದ್ರಕ್ಕೆ ದೊಡ್ಡ ಪ್ರಮಾಣದ ನಗದು ಹಣವನ್ನು ತೆಗೆದುಕೊಂಡು ಹೋಗುತ್ತಿದ್ದುದನ್ನು ಆತನ ಸಹೋದರ ಅಭಿಷೇಕ್ ಗಮನಿಸಿದ್ದನು ಈ ಹಣದ ಮೂಲದ ಬಗ್ಗೆ ಕೇಳಿದಾಗ ಅವಿನಾಶ್ ಸರಿಯಾದ ಉತ್ತರ ನೀಡಿರಲಿಲ್ಲ.
ಅಭಿಷೇಕ್ ಮತ್ತೊಬ್ಬ ಆರೋಪಿ ಅನುಕಲ್ಪ್ ಎಂಬಾತನನ್ನು ಪ್ರಶ್ನಿಸಿದಾಗ, “ಭಕ್ತರು ಸಂತೋಷದಿಂದ ನೀಡಿದ ಹಣ ಮತ್ತು ದರ್ಶನ ಪಡೆಯಲು ಸಹಾಯ ಮಾಡಿದ್ದಕ್ಕಾಗಿ ನೀಡಿದ ಹಣವಿದು” ಎಂದು ಸುಳ್ಳು ಹೇಳಿ ದಾರಿ ತಪ್ಪಿಸಲು ಯತ್ನಿಸಿದ್ದಾನೆ. ಅಲ್ಲದೆ ಈ ವಿಷಯವನ್ನು ಮತ್ತೊಮ್ಮೆ ಎತ್ತದಂತೆ ಅಭಿಷೇಕ್‌ಗೆ ಬೆದರಿಕೆ ಹಾಕಿದ್ದನು.
ತನಿಖೆ ತೀವ್ರ; ಎಸ್‌ಐಟಿ ಗಡುವು ವಿಸ್ತರಣೆ
ಜುಲೈ 3 ರಂದು ವಿಶೇಷ ತನಿಖಾ ತಂಡದ (SIT) ಅಧಿಕಾರಿಗಳು ಅಯೋಧ್ಯೆಯ ರಾಮ ಮಂದಿರದ ಆವರಣಕ್ಕೆ ಭೇಟಿ ನೀಡಿ ಹೆಚ್ಚಿನ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಹಗರಣದ ವ್ಯಾಪ್ತಿ ದೊಡ್ಡದಾಗಿರುವುದರಿಂದ ತನಿಖೆಯನ್ನು ಪೂರ್ಣಗೊಳಿಸಲು ರಾಜ್ಯ ಸರ್ಕಾರವು ಜುಲೈ 1 ರಂದು ಎಸ್‌ಐಟಿಗೆ ಇನ್ನೂ 15 ದಿನಗಳ ಕಾಲಾವಕಾಶವನ್ನು ವಿಸ್ತರಿಸಿದೆ.
ಜೂನ್ 23 ರಂದು ಎಸ್‌ಐಟಿ ಪ್ರಾಥಮಿಕ ವರದಿ ಸಲ್ಲಿಸಿದ ನಂತರ ಜೂನ್ 25 ರಂದು ಎಫ್‌ಐಆರ್ ದಾಖಲಿಸಿ 8 ಜನ ಆರೋಪಿಗಳನ್ನು ಬಂಧಿಸಲಾಗಿತ್ತು. ಇದರ ಬೆನ್ನಲ್ಲೇ ಮಂದಿರ ಟ್ರಸ್ಟ್‌ನ ಪ್ರಮುಖರಾದ ಚಂಪತ್ ರಾಯ್ ಮತ್ತು ಮಾಜಿ ಟ್ರಸ್ಟಿ ಅನಿಲ್ ಮಿಶ್ರಾ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ.
ಇದನ್ನೂ ಓದಿ:
ಭುಗಿಲೆದ್ದ ರಾಜಕೀಯ ಬಿರುಗಾಳಿ
ಈ ಭ್ರಷ್ಟಾಚಾರದ ವಿಷಯವು ಉತ್ತರ ಪ್ರದೇಶ ರಾಜಕಾರಣದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿದೆ. ವಿರೋಧ ಪಕ್ಷಗಳು ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿವೆ.
ಆದರೆ, ಬಿಜೆಪಿ ಸಂಸದ ದಿನೇಶ್ ಶರ್ಮಾ ಪ್ರತಿಕ್ರಿಯಿಸಿ, “ಮುಖ್ಯಮಂತ್ರಿಗಳು ತಕ್ಷಣವೇ ಎಸ್‌ಐಟಿ ತನಿಖೆಗೆ ಆದೇಶಿಸಿದ್ದು, ಅತ್ಯಂತ ಪಾರದರ್ಶಕ ತನಿಖೆ ನಡೆಯುತ್ತಿದೆ. ಸಾರ್ವಜನಿಕರು ನಂಬಿಕೆ ಇಡಬೇಕು” ಎಂದಿದ್ದಾರೆ. ರಾಜ್ಯ ಸಚಿವ ಸಂಜಯ್ ನಿಶಾದ್ ಮಾತನಾಡಿ, “ಹಿಂದಿನ ಸರ್ಕಾರಗಳಂತೆ ನಮ್ಮ ಸರ್ಕಾರ ಭ್ರಷ್ಟಾಚಾರವನ್ನು ಮುಚ್ಚಿ ಹಾಕುತ್ತಿಲ್ಲ, ಕಠಿಣ ಕ್ರಮ ಕೈಗೊಳ್ಳುತ್ತಿದೆ” ಎಂದು ಸಮರ್ಥಿಸಿಕೊಂಡಿದ್ದಾರೆ.



