April 26, 2026
Sunday, April 26, 2026
spot_img

‘ಜನಮನ ಬಿಜೆಪಿ ಕಡೆ ತಿರುಗಿದೆ, ಬಂಗಾಳದಲ್ಲಿ ದೀದಿ ಸೋಲು ಖಚಿತ’: ಅಮಿತ್ ಶಾ ವಿಶ್ವಾಸ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ರಾಜಕೀಯ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ನಡುವೆಯೇ, ಕೇಂದ್ರ ಗೃಹ ಸಚಿವ ಅಮಿತ್ ಶಾ ಬಿಜೆಪಿ ಗೆಲುವಿನ ಬಗ್ಗೆ ಭಾರೀ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಬಾರಿ ರಾಜ್ಯದಲ್ಲಿ ರಾಜಕೀಯ ಬದಲಾವಣೆ ಖಚಿತವಾಗಿದ್ದು, ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಕೋಲ್ಕತ್ತಾದ ಟಾಲಿಗಂಜ್‌ನಲ್ಲಿ ನಡೆದ ರೋಡ್‌ಶೋ ವೇಳೆ ಮಾತನಾಡಿದ ಅವರು, ಜನಮನ ಬಿಜೆಪಿ ಕಡೆ ತಿರುಗಿದೆ ಎಂದು ಅಭಿಪ್ರಾಯಪಟ್ಟರು.

ಪ್ರತಿ ಪಕ್ಷವೂ ತನ್ನ ಗೆಲುವಿನ ಬಗ್ಗೆ ಮಾತನಾಡುವುದು ಸಹಜ. ಆದರೆ ಪಶ್ಚಿಮ ಬಂಗಾಳದ ಜನರು ಈ ಬಾರಿ ವಿಭಿನ್ನ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬ ವಿಶ್ವಾಸ ನಮಗಿದೆ ಎಂದು ಅಮಿತ್ ಶಾ ಹೇಳಿದರು. ಮತದಾರರು ಬದಲಾವಣೆಯ ಪರ ನಿಂತಿದ್ದು, ಚುನಾವಣಾ ಫಲಿತಾಂಶ ಅದನ್ನು ತೋರಿಸಲಿದೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ:

ಇದೇ ವೇಳೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ ನೀಡಿರುವ ವಿಚಾರಕ್ಕೂ ಶಾ ತಿರುಗೇಟು ನೀಡಿದರು. ರಾಜಕೀಯವಾಗಿ ಟೀಕೆ ಮಾಡುವುದು, ಕಾನೂನು ಬೆದರಿಕೆ ಹಾಕುವುದು ಇವೆಲ್ಲವೂ ಚುನಾವಣಾ ಸಂದರ್ಭದಲ್ಲಿ ಸಾಮಾನ್ಯ. ಆದರೆ ಅಂತಿಮವಾಗಿ ಜನರ ತೀರ್ಪೇ ಮುಖ್ಯ ಎಂದು ಹೇಳಿದರು.

ಚುನಾವಣಾ ಹಂತಗಳಲ್ಲಿ ಶಾಂತಿಯುತ ಮತದಾನ ನಡೆಯಬೇಕು ಎಂಬುದನ್ನು ಒತ್ತಿ ಹೇಳಿದ ಅವರು, ಮತದಾರರಿಗೆ ತೊಂದರೆ ಉಂಟುಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !