ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ 2026ರ ರೋಚಕ ಪಂದ್ಯಗಳಲ್ಲಿ ಒಂದಾಗಿ ಗುರುತಿಸಿಕೊಳ್ಳುವಂತೆ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಮುಖಾಮುಖಿ ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ನೀಡಿತು. ಕೊನೆಯ ಎಸೆತದವರೆಗೂ ಕುತೂಹಲ ಕೆರಳಿಸಿದ ಈ ಪಂದ್ಯ ಸೂಪರ್ ಓವರ್‌ಗೆ ತಲುಪಿದ್ದು, ಅಂತಿಮವಾಗಿ ಕೆಕೆಆರ್ ತಂಡ ಸಂಭ್ರಮಾಚರಣೆ ನಡೆಸಿತು.
ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿತು. ಪವರ್‌ಪ್ಲೇ ಅವಧಿಯಲ್ಲೇ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡ ತಂಡ ಒತ್ತಡಕ್ಕೆ ಒಳಗಾಯಿತು. ಈ ಹಂತದಲ್ಲಿ ಜವಾಬ್ದಾರಿಯುತ ಆಟವಾಡಿದ ರಿಂಕು ಸಿಂಗ್, ತಂಡದ ಇನ್ನಿಂಗ್ಸ್‌ಗೆ ಬಲ ತುಂಬಿದರು. ಕೇವಲ ರನ್ ಗಳಿಸುವುದಕ್ಕಿಂತ ಸ್ಥಿರತೆ ತಂದುಕೊಟ್ಟ ರಿಂಕು, ಅಜೇಯ 83 ರನ್‌ಗಳ ಮೌಲ್ಯಯುತ ಇನ್ನಿಂಗ್ಸ್ ಆಡಿದರು. ಸುನಿಲ್ ನರೈನ್ ಜೊತೆಯಾಟವೂ ಕೆಕೆಆರ್‌ಗೆ ನೆರವಾಗಿ, ತಂಡ 20 ಓವರ್‌ಗಳಲ್ಲಿ 155 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು.
ಇದನ್ನೂ ಓದಿ:
ಗುರಿ ಬೆನ್ನಟ್ಟಿದ ಲಕ್ನೋ ಪರ ನಾಯಕ ರಿಷಭ್ ಪಂತ್ ಹೋರಾಟದ ಮನೋಭಾವ ತೋರಿದರು. ಐಡೆನ್ ಮಾರ್ಕ್ರಾಮ್ ಮತ್ತು ಆಯುಷ್ ಬಡೋನಿ ಕೂಡ ಉಪಯುಕ್ತ ರನ್ ಸೇರಿಸಿದರೂ, ಮಧ್ಯಂತರದಲ್ಲಿ ಕೆಕೆಆರ್ ಬೌಲರ್‌ಗಳು ಪಂದ್ಯವನ್ನು ತಮ್ಮತ್ತ ತಿರುಗಿಸಿದರು. ಕೊನೆಯ ಓವರ್‌ನಲ್ಲಿ ಲಕ್ನೋಗೆ ಕಠಿಣ ಗುರಿ ಎದುರಾದರೂ, ಅಂತಿಮ ಎಸೆತದಲ್ಲಿ ಮೊಹಮ್ಮದ್ ಶಮಿ ಸಿಕ್ಸರ್ ಸಿಡಿಸಿ ಪಂದ್ಯವನ್ನು ಟೈಗೆ ಕೊಂಡೊಯ್ದರು.
ಸೂಪರ್ ಓವರ್‌ನಲ್ಲಿ ಮಾತ್ರ ಲಕ್ನೋ ಬ್ಯಾಟಿಂಗ್ ಸಂಪೂರ್ಣ ಕುಸಿತ ಕಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಕೇವಲ 1 ರನ್ ಕಲೆಹಾಕಿ ಕೆಕೆಆರ್ ಗೆಲುವಿನ 2 ರನ್ ಗುರಿ ನೀಡಿತು. ಅತಿ ಸಣ್ಣ ಗುರಿ ಬೆನ್ನಟ್ಟಿದ ಕೆಕೆಆರ್ ಪರ ಮೊದಲ ಎಸೆತದಲ್ಲೇ ರಿಂಕು ಸಿಂಗ್ ಬೌಂಡರಿ ಬಾರಿಸಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು. ಈ ಜಯದೊಂದಿಗೆ ಕೆಕೆಆರ್ ಮಹತ್ವದ ಎರಡು ಅಂಕಗಳನ್ನು ತನ್ನ ಖಾತೆಗೆ ಸೇರಿಸಿಕೊಂಡಿತು.



