ಹೊಸದಿಗಂತ ವರದಿ ಸುಳ್ಯ:
ಸುಳ್ಯ ಮತ್ತು ಸುಬ್ರಹ್ಮಣ್ಯ ಮೆಸ್ಕಾಂ ಉಪವಿಭಾಗ ಮಟ್ಟದ ಜನಸಂಪರ್ಕ ಸಭೆಯು ಮಂಗಳವಾರ ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಪ್ರಾರಂಭವಾಗುತ್ತಿದ್ದಂತೆ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ನೇತೃತ್ವದಲ್ಲಿ ಧರಣಿ ನಡೆದು ಜನ ಸಂಪರ್ಕ ಸಭೆಯು ರದ್ದುಗೊಂಡಿತು.
ಅಧೀಕ್ಷಕ ಇಂಜಿನಿಯರ್ ಕೃಷ್ಣರಾಜ್ ನೇತೃತ್ವದಲ್ಲಿ ಆರಂಭವಾದ ಸಭೆಯಲ್ಲಿ ಸುಳ್ಯ ಮೆಸ್ಕಾಂ ಉಪವಿಭಾಗದ ವ್ಯಾಪ್ತಿಯಲ್ಲಿ ಮೆಸ್ಕಾಂ ಸಲಹಾ ಸಮಿತಿಯ ಸಭೆಯನ್ನು ನಡೆಸದೇ ಇದ್ದು ಜೊತೆಗೆ ಸದಸ್ಯರಿಗೆ ಜನ ಸಂಪರ್ಕ ಸಭೆಯ ಮಹಿತಿಯನ್ನು ನೀಡದೇ ಸಭೆ ನಡೆಸುತ್ತಿರುವುದು ಸರಿಯಾದ ಕ್ರಮವಲ್ಲ ಹಾಗೂ ಸಲಹಾ ಸಮಿತಿ ಸಭೆ ನಡೆಸಿದರೆ ಅಧಿಕಾರಿಗಳಿಗೆ ಸಮಸ್ಯೆಗಳನ್ನು ಪರಿಹರಿಸಬೇಕಾಗುತ್ತದೆ ಅಲ್ಲವೇ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ ವಿಷಯ ಪ್ರಸ್ತಾಪಿಸಿ ಸಭಾ ವೇದಿಕೆಯ ಮುಂಭಾಗದಲ್ಲಿ ಧರಣಿ ಕುಳಿತು ಸಭೆ ಮುಂದೂಡುವಂತೆ ಆಗ್ರಹಿಸಿದರು. ಈ ಸಂಧರ್ಭ ಕೆಡಿಪಿ ಸದಸ್ಯ ಧರ್ಮಪಾಲ ಕೊಯಿಂಗಾಜೆ, ರಾಧಕೃಷ್ಣ ಪರಿವಾರಕಾನ, ಆರ್.ಬಿ. ಬಷೀರ್, ದಿನೇಶ್ ಸರಸ್ವತಿ ಮಹಲ್, ಜುನೈದ್ ಅಡ್ಕಾರ್ ಮತ್ತಿತರರು ಧರಣಿ ಕುಳಿತು ಸಭೆಯನ್ನು ಮುಂದೂಡಲು ಆಗ್ರಹಿಸಿ ಆಢಳಿತರೂಢ ಪಕ್ಷದ ನಾಯಕರ ಮಧ್ಯೆ ಪರಸ್ಪರ ಮಾತಿನ ಚಕಮಕಿ ನಡೆಯಿತು.
ಸುಳ್ಯದಲ್ಲಿ ವಿದ್ಯುತ್ ತೊಂದರೆಗಳನ್ನು ಸರಿಪಡಿಸಬೇಕಾಗಿದ್ದು ನಿಮ್ಮ ಕರ್ತವ್ಯವನ್ನು ಸರಿಯಾಗಿ ಪಾಲನೆ ಮಾಡಬೇಕು ಜೊತೆಗೆ ಮೆಸ್ಕಾಂ ಸಲಹಾ ಮಂಡಳಿಗಳ ಸಭೆಯನ್ನು ಸರಿಯಾಗಿ ಮಾಡಬೇಕು ಅಲ್ಲದೇ ಅಂಡರ್ ಕೇಬಲ್ ಆಳವಡಿಕೆಯು ಪೂರ್ಣವಾಗಿದ್ದು ಇದರ ಕತೆಯೇನು ಎಂದು ಪ್ರಶ್ನಿಸಿದರು.
ಮೇ 12ರ ಒಳಗೆ ಸಲಹಾ ಸಮಿತಿ ಸಭೆ ಮಾಡಲು ಸೂಚನೆ
ಇತ್ತ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರ ನೇತೃತ್ವದಲ್ಲಿ ಧರಣಿ ನಡೆದಿದ್ದು ಸಭೆಯನ್ನು ರದ್ದುಪಡಿಸಿ ಮಂದೂಡಲು ಆದೇಶಿಸಿದರು. ಬಳಿಕ ಮೇ 3ನೇ ವಾರದಲ್ಲಿ ಸುಳ್ಯಕ್ಕೆ ಪ್ರತ್ಯೇಕ ಜನ ಸಂಪರ್ಕ ಸಭೆಯನ್ನು ನಡೆಸುವುದಾಗಿ ಕೃಷ್ಣರಾಜ್ ಸಭೆಯಲ್ಲಿ ತಿಳಿಸಿ ಸಭೆಗೆ ಆಗಮಿಸಿದ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದರು.



