ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಮ್ಯಾಚ್ ವೇಳೆ ಭದ್ರತಾ ಲೋಪ ಉಂಟಾಗಿದ್ದು, ಬರೋಬ್ಬರಿ 240 ಸಿಸಿಟಿವಿ ಕ್ಯಾಮೆರಾಗಳನ್ನು ನಿಷ್ಕ್ರಿಯಗೊಳಿಸಲಾಗಿತ್ತು. ಈ ಬೆನ್ನಲ್ಲೇ ಭದ್ರತಾ ಲೋಪ ಕುರಿತು ಅನುಮಾನಗಳು ವ್ಯಕ್ತವಾಗಿತ್ತು.
ಹೀಗಾಗಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸ್ಪಷ್ಟನೆ ನೀಡಿದ್ದು, ಇದು ಸಂಪೂರ್ಣ ಖಾಸಗಿ ಹಿಡಿತದಲ್ಲಿದ್ದು, ಈ ಕ್ಯಾಮೆರಾಗಳು ಪೊಲೀಸ್ ಇಲಾಖೆಯ ಭದ್ರತಾ ಮೂಲಸೌಕರ್ಯದ ಭಾಗವಲ್ಲ ಎಂದು ಸ್ಪಷ್ಟನೆ ನೀಡಿದೆ.
ಪಂದ್ಯದ ಸಮಯ ಕ್ರೀಡಾಂಗಣದಲ್ಲಿ ಭದ್ರತೆ ವಿಚಾರದಲ್ಲಿ ಪೊಲೀಸ್ ಇಲಾಖೆ ಸ್ವತಂತ್ರ ವ್ಯವಸ್ಥೆಯನ್ನು ಹೊಂದಿದ್ದು, ಈ ಸಂಬಂಧ ಖಾಸಗಿ ಸಿಸಿಟಿವಿ ವ್ಯವಸ್ಥೆಗಳೊಂದಿಗೆ ಯಾವುದೇ ಸಂಬಂಧವಿಲ್ಲ. ಅಲ್ಲಿನ ಸಮಸ್ಯೆ ಅವರ ವೈಯಕ್ತಿಕ ವಿಚಾರವಾಗಿದ್ದು, ಪಾವತಿ ಸಂಬಂಧಿತ ಸಮಸ್ಯೆಯಿಂದ ಉಂಟಾಗಿದೆ ಎಂದು ಹೇಳಲಾಗಿದೆ. ಹೀಗಾಗಿ ಪೊಲೀಸ್ ಇಲಾಖೆ ಅಥವಾ ಕೆಎಸ್‌ಸಿಎಯ ಈ ವಿಚಾರದಲ್ಲಿ ಯಾವುದೇ ಪಾತ್ರವಿಲ್ಲ ಎಂದು ಸಂಘ ತಿಳಿಸಿದೆ.
ಇನ್ನು ಪಂದ್ಯ ಶುರುವಾಗುವ ಮುನ್ನ ಕ್ರೀಡಾಂಗಣದ ದ್ವಾರಗಳನ್ನು ಪ್ರವೇಶಕ್ಕೆ ಜನರಿಗೆ ತೆರೆಯುವ ಮುನ್ನ ಈ ಕುರಿತು ಪರಿಶೀಲನೆ ನಡೆಸಲಾಗಿದೆ. ಈ ವೇಳೆ ಯಾವುದೇ ಭದ್ರತಾ ವೈಫಲ್ಯ ಉಂಟಾಗಿಲ್ಲ ಎಂದು ಕೆಎಸ್‌ಸಿಎ ಸ್ಪಷ್ಟಪಡಿಸಿದೆ.
ಇದರಿಂದಾಗಿ ಅಲ್ಲಿ ಪಂದ್ಯ ನೋಡಲು ಬಂದ ಪ್ರೇಕ್ಷಕರು, ಅದೇ ರೀತ್ ಆಟಗಾರರ ಸುರಕ್ಷತೆಗೆ ಯಾವುದೇ ತೊಂದರೆ ಉಂಟಾಗಿಲ್ಲ. ಸಮಸ್ಯೆಗಳನ್ನು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ನಿಭಾಯಿಸಲಾಗಿದೆ ಎಂದು ಸಂಘ ತಿಳಿಸಿದೆ.



