ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬೈನ ಐತಿಹಾಸಿಕ ವಾಂಖೆಡೆ ಕ್ರೀಡಾಂಗಣದಲ್ಲಿ ರನ್‌ಗಳ ಹೊಳೆಯೇ ಹರಿಯಿತು. ಬ್ಯಾಟರ್‌ಗಳ ಅಬ್ಬರಕ್ಕೆ ಬೌಂಡರಿ ಗೆರೆಗಳು ಚಿಕ್ಕದಾದವು. ಮುಂಬೈ ಇಂಡಿಯನ್ಸ್ ನೀಡಿದ್ದ ಬೃಹತ್ ಗುರಿಯನ್ನು ಬೆನ್ನಟ್ಟಿದ ಸನ್ ರೈಸರ್ಸ್ ಹೈದರಾಬಾದ್, 6 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸುವ ಮೂಲಕ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಜಿಗಿದಿದೆ.
244 ರನ್‌ಗಳ ಕಠಿಣ ಗುರಿ ಬೆನ್ನಟ್ಟಿದ ಹೈದರಾಬಾದ್‌ಗೆ ಅಭಿಷೇಕ್ ಶರ್ಮಾ ಮತ್ತು ಟಾವಿಸ್ ಹೆಡ್ ಸ್ಫೋಟಕ ಆರಂಭ ನೀಡಿದರು. ಮುಂಬೈ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಈ ಜೋಡಿ ಕೇವಲ 6 ಓವರ್‌ಗಳಲ್ಲಿ ತಂಡದ ಮೊತ್ತವನ್ನು 92 ರನ್‌ಗಳಿಗೆ ತಲುಪಿಸಿತು. ಮೊದಲ ವಿಕೆಟ್‌ಗೆ ಕೇವಲ 52 ಎಸೆತಗಳಲ್ಲಿ 129 ರನ್‌ಗಳ ಕಾಣಿಕೆ ನೀಡಿದ ಈ ಜೋಡಿ, ಹೈದರಾಬಾದ್ ಗೆಲುವಿನ ಹಾದಿಯನ್ನು ಸುಗಮಗೊಳಿಸಿತು.
ಒಂದು ಹಂತದಲ್ಲಿ ಹೈದರಾಬಾದ್ ಸುಲಭವಾಗಿ ಗೆಲ್ಲುವ ಮುನ್ಸೂಚನೆ ನೀಡಿತ್ತು. ಆದರೆ, 9ನೇ ಓವರ್‌ನಲ್ಲಿ ದಾಳಿಗಿಳಿದ ಯುವ ಸ್ಪಿನ್ನರ್ ಎ.ಎಂ. ಗಜನ್‌ಫರ್, ಅಭಿಷೇಕ್ ಶರ್ಮಾ ಮತ್ತು ಇಶಾನ್ ಕಿಶನ್ ವಿಕೆಟ್ ಪಡೆಯುವ ಮೂಲಕ ಪಂದ್ಯಕ್ಕೆ ಟ್ವಿಸ್ಟ್ ನೀಡಿದರು. ನಂತರ ನಾಯಕ ಹಾರ್ದಿಕ್ ಪಾಂಡ್ಯ ಕೂಡ ಟ್ರಾವಿಸ್ ಹೆಡ್ ವಿಕೆಟ್ ಕಬಳಿಸಿದಾಗ ಮುಂಬೈ ಪಾಳಯದಲ್ಲಿ ಗೆಲುವಿನ ಆಸೆ ಚಿಗುರಿತ್ತು.
ಸತತ ವಿಕೆಟ್ ಬಿದ್ದರೂ ಎದೆಗುಂದದ ಹೈದರಾಬಾದ್ ಪರ ಹೆನ್ರಿಚ್ ಕ್ಲಾಸೆನ್ ಅಬ್ಬರಿಸಿದರು. ಮುಂಬೈ ಬೌಲರ್‌ಗಳ ಮೇಲೆ ಸವಾರಿ ಮಾಡಿದ ಕ್ಲಾಸೆನ್, ಇನ್ನೂ 8 ಎಸೆತಗಳು ಬಾಕಿ ಇರುವಂತೆಯೇ ತಂಡವನ್ನು ಗೆಲುವಿನ ದಡ ಸೇರಿಸಿದರು. ಹೈದರಾಬಾದ್ 18.4 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 249 ರನ್ ಬಾರಿಸಿ ಐತಿಹಾಸಿಕ ಜಯ ತನ್ನದಾಗಿಸಿಕೊಂಡಿತು. ಈ ಗೆಲುವಿನೊಂದಿಗೆ ಎಸ್‌ಆರ್‌ಹೆಚ್ ಒಟ್ಟು 12 ಅಂಕಗಳೊಂದಿಗೆ ಟಾಪ್-3 ಸ್ಥಾನಕ್ಕೇರಿದೆ.



