ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ ಅಂದಮೇಲೆ ಅಲ್ಲಿ ರನ್ ಮಳೆ, ವಿಕೆಟ್ ಬೇಟೆ ಮತ್ತು ದಾಖಲೆಗಳ ಸುರಿಮಳೆ ಸಾಮಾನ್ಯ. ಆದರೆ ಮುಂಬೈ ಇಂಡಿಯನ್ಸ್ ತಂಡದ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಈಗ ಯಾರೂ ಬಯಸದ, ಅತ್ಯಂತ ವಿಲಕ್ಷಣವಾದ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ‘ಇಂಪ್ಯಾಕ್ಟ್ ಪ್ಲೇಯರ್’ ನಿಯಮದಡಿ ಶಾರ್ದೂಲ್ ಠಾಕೂರ್ ಅವರನ್ನು ಮೈದಾನಕ್ಕಿಳಿಸಿತ್ತು. ಸಾಮಾನ್ಯವಾಗಿ ಪಂದ್ಯದ ಗತಿಯನ್ನು ಬದಲಿಸಲು ಅಥವಾ ಹೆಚ್ಚುವರಿ ಬೌಲಿಂಗ್ ಬಲಕ್ಕಾಗಿ ಇಂಪ್ಯಾಕ್ಟ್ ಪ್ಲೇಯರ್ ಬಳಸಲಾಗುತ್ತದೆ. ಆದರೆ, ಈ ಪಂದ್ಯದಲ್ಲಿ ಶಾರ್ದೂಲ್ ಕಣಕ್ಕಿಳಿದರೂ ಅವರಿಗೆ ಬ್ಯಾಟಿಂಗ್ ಮಾಡುವ ಅವಕಾಶ ಸಿಗಲಿಲ್ಲ, ಜೊತೆಗೆ ನಾಯಕ ಹಾರ್ದಿಕ್ ಪಾಂಡ್ಯ ಅವರಿಂದ ಒಂದು ಓವರ್ ಬೌಲಿಂಗ್ ಕೂಡ ಸಿಗಲಿಲ್ಲ!
ಇದರೊಂದಿಗೆ, ಐಪಿಎಲ್ ಇತಿಹಾಸದಲ್ಲೇ ಇಂಪ್ಯಾಕ್ಟ್ ಪ್ಲೇಯರ್ ಆಗಿ ಮೈದಾನ ಪ್ರವೇಶಿಸಿ, ಬ್ಯಾಟಿಂಗ್ ಅಥವಾ ಬೌಲಿಂಗ್ ಎರಡನ್ನೂ ಮಾಡದ ಮೊದಲ ಆಟಗಾರ ಎಂಬ ವಿಚಿತ್ರ ಕೀರ್ತಿಗೆ ಶಾರ್ದೂಲ್ ಭಾಜನರಾಗಿದ್ದಾರೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಮುಂಬೈ ಇಂಡಿಯನ್ಸ್, ರಯಾನ್ ರಿಕೆಲ್ಟನ್ ಬಾರಿಸಿದ ಸ್ಫೋಟಕ ಶತಕದ (123 ರನ್*) ನೆರವಿನಿಂದ 243 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. ಈ ಗುರಿ ಬೆನ್ನಟ್ಟಿದ ಹೈದರಾಬಾದ್ ಬ್ಯಾಟರ್‌ಗಳು ಮುಂಬೈ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಮುಂಬೈ ತಂಡವು ಆರು ಜನ ಬೌಲರ್‌ಗಳನ್ನು ಬಳಸಿಕೊಂಡರೂ ಹೈದರಾಬಾದ್ ಆರ್ಭಟ ತಡೆಯಲು ಸಾಧ್ಯವಾಗಲಿಲ್ಲ.
ವಿಶೇಷವೆಂದರೆ, ತಜ್ಞ ಬೌಲರ್ ಆಗಿ ಇಂಪ್ಯಾಕ್ಟ್ ಪ್ಲೇಯರ್ ರೂಪದಲ್ಲಿ ಬಂದ ಶಾರ್ದೂಲ್ ಕೈಗೆ ಚೆಂಡು ನೀಡದ ಹಾರ್ದಿಕ್ ಪಾಂಡ್ಯ ನಿರ್ಧಾರ ಈಗ ಭಾರಿ ಚರ್ಚೆಗೆ ಕಾರಣವಾಗಿದೆ. ಅಂತಿಮವಾಗಿ ಸನ್‌ರೈಸರ್ಸ್ ಹೈದರಾಬಾದ್ ಕೇವಲ 18.4 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು ಈ ಬೃಹತ್ ಗುರಿಯನ್ನು ತಲುಪಿ ಭರ್ಜರಿ ಜಯ ಸಾಧಿಸಿತು.
ಇದೇ ಸೀಸನ್‌ನಲ್ಲಿ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ 3 ವಿಕೆಟ್ ಪಡೆದು ‘ಪಂದ್ಯ ಪುರುಷ’ ಪ್ರಶಸ್ತಿ ಗೆದ್ದಿದ್ದ ಶಾರ್ದೂಲ್, ತಮ್ಮ ಸಾಮರ್ಥ್ಯ ಏನು ಎಂಬುದನ್ನು ಸಾಬೀತುಪಡಿಸಿದ್ದರು. ಆದರೆ ಹೈದರಾಬಾದ್ ವಿರುದ್ಧದ ಹೈ-ಸ್ಕೋರಿಂಗ್ ಪಂದ್ಯದಲ್ಲಿ ಅವರನ್ನು ಕೇವಲ ಫೀಲ್ಡಿಂಗ್‌ಗೆ ಸೀಮಿತಗೊಳಿಸಿದ್ದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.



