April 30, 2026
Thursday, April 30, 2026
spot_img

ಹಸು ಮೈ ತೊಳೆಯೋದಕ್ಕೆ ಕೆರೆಗೆ ತೆರಳಿದ್ದ ಬಾಲಕ ನೀರಲ್ಲಿ ಮುಳುಗಿ ದಾರುಣ ಸಾ*ವು

ಹೊಸದಿಗಂತ ವರದಿ ತುಮಕೂರು :

ಹಸು ಮೈ ತೊಳೆಯಲು ಕೆರೆಗೆ ತೆರಳಿದ್ದ ಬಾಲಕ ನೀರಲ್ಲಿ ಮುಳುಗಿ ಸಾವನ್ನಪ್ಪಿದ ದುರ್ಘಟನೆ ಗುಬ್ಬಿ ತಾಲ್ಲೂಕಿನ ಹೇರೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕಿಟ್ಟದಕುಪ್ಪೆ ಗ್ರಾಮದಲ್ಲಿ ನಡೆದಿದೆ.

ಮೃತ ಬಾಲಕನನ್ನು ಕಿಟ್ಟದಕುಪ್ಪೆ ಗ್ರಾಮದ ಬಸವರಾಜು ಅವರ ಪುತ್ರ ಮಧು (12) ಎಂದು ಗುರುತಿಸಲಾಗಿದೆ. ಈತ (ಏ29) ಬುಧವಾರ ಮಧ್ಯಾಹ್ನ 2 ಘಂಟೆ ಸುಮಾರಿನಲ್ಲಿ ಹಸುಗಳನ್ನು ತೊಳೆಯುವ ಉದ್ದೇಶದಿಂದ ಕೆರೆಗೆ ಹೋಗಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದಿದ್ದು, ಈಜು ಬಾರದ ಕಾರಣ ಮುಳುಗಿ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.

ಘಟನೆ ಬಳಿಕ ಗ್ರಾಮಸ್ಥರು ಹಾಗೂ ಸಂಬಂಧಿಕರು ಬಾಲಕನಿಗಾಗಿ ಶೋಧ ಕಾರ್ಯ ನಡೆಸಿದರೂ ಪತ್ತೆಯಾಗಲಿಲ್ಲ. ಬಳಿಕ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದ್ದು, ಅವರು ಸ್ಥಳಕ್ಕೆ ಆಗಮಿಸಿ ಶೋಧ ಕಾರ್ಯಾಚರಣೆ ನಡೆಸಿದರೂ ಮೃತದೇಹ ಪತ್ತೆಯಾಗಿರಲಿಲ್ಲ.ಗುರುವಾರ ಮುಂಜಾನೆ ನಡೆದ ಕಾರ್ಯಾಚರಣೆಯಲ್ಲಿ ಬಾಲಕನ ಮೃತದೇಹವ ಪತ್ತೆಯಾಗಿದ್ದು ಮೃತದೇಹವನ್ನು ಗುಬ್ಬಿ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.

ಘಟನೆಯಿಂದ ಗ್ರಾಮದಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದ್ದು, ಪೋಷಕರು ಹಾಗೂ ಬಂಧುಬಳಗದ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ಪೋಷಕರು ಗುಬ್ಬಿ ಪೋಲಿಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಸ್ಥಳೀಯರು ಮಕ್ಕಳನ್ನು ನೀರಿನ ಪ್ರದೇಶಗಳ ಬಳಿ ಕಳುಹಿಸುವಾಗ ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !