June 24, 2026
Wednesday, June 24, 2026
spot_img

ಮಂಜಿನ ನಗರಿಯಲ್ಲೂ ಗಾಂಜಾ ಘಾಟು: ಬರೋಬ್ಬರಿ 15 ಕೇಜಿ ಸಹಿತ ಮೂವರ ಬಂಧನ

ಹೊಸದಿಗಂತ ವರದಿ ಮಡಿಕೇರಿ:

ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಮಾಲು ಸಹಿತ ಬಂಧಿಸುವಲ್ಲಿ ಮಡಿಕೇರಿ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಜಾಬೀರ್ (21), ಒರಿಸ್ಸಾ ರಾಜ್ಯದ ಕಂದನಮಾಲ್ ಜಿಲ್ಲೆಯ ಕಳಿಂಗ ಗ್ರಾಮದ ಸುಲ್ತಾನ್ ಪ್ರದಾನ್ (55) ಹಾಗೂ ಇದೇ ರಾಜ್ಯದ ಮದಿನಂಜು ಗ್ರಾಮದ ಸ್ವರ್ಣಲತಾ ನಾಯಕ್ (35) ಬಂಧಿತ ಆರೋಪಿಗಳಾಗಿದ್ದು, ಆರೋಪಿಗಳಿಂದ 15.903 ಕೆ.ಜಿ.ಗಾಂಜಾ ಹಾಗೂ ಮೂರು ಮೊಬೈಲ್’ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಇಬ್ನಿವಳವಾಡಿ ಗ್ರಾಮದ ಸಿಂಕೋನಾದಿಂದ ಮಕ್ಕಂದೂರು ಕಡೆಗೆ ಹೋಗುವ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿರುವುದಾಗಿ ದೊರೆತ ಖಚಿತ ಸುಳಿವಿನ ಮೇರೆಗೆ ದಾಳಿ ನಡೆಸಿದ ಪೊಲೀಸರು ಮಾಲು ಸಹಿತ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜಿಲ್ಲಾ ಡಿಎಸ್‍ಬಿ ಇನ್ಸ್‌ಪೆಕ್ಟರ್ ಮೇದಪ್ಪ ಐ.ಪಿ,, ಗ್ರಾಮಾಂತರ ಠಾಣಾ ಇನ್ಸ್‌ಪೆಕ್ಟರ್ ಚಂದ್ರಶೇಖರ್ ಹೆಚ್.ವಿ, ಎಎಸ್‍ಐ ಚರ್ಮಣ ಸಿ.ಯು, ಸಿಬ್ಬಂದಿಗಳಾದ ಮಹೇಶ್ ಎಂ.ಕೆ, ಉದಯ್ ಕುಮಾರ್ ಜಿ.ಆರ್, ನಿರಂಜನ ಎಂ.ಎನ್, ಪ್ರವೀಣ್ ಬಿ.ಕೆ, ರಾಜೇಶ್ ಸಿ.ಕೆ, ಶರತ್ ರೈ ಬಿ.ಜೆ, ರುದ್ರಪ್ಪ ಜಿ ಹಾಗೂ ಗಾಯತ್ರಿ ಎಂ. ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !