ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೆಲಸದ ಒತ್ತಡ, ಕೌಟುಂಬಿಕ ಸಮಸ್ಯೆ ಅಥವಾ ಭವಿಷ್ಯದ ಚಿಂತೆಯಿಂದಾಗಿ ‘ಅತಿಯಾದ ಯೋಚನೆ’ ಮಾಡುವುದು ರೂಢಿಯಾಗಿಬಿಟ್ಟಿದೆ. ವೈದ್ಯಕೀಯ ಸಂಶೋಧನೆಗಳ ಪ್ರಕಾರ, ದೀರ್ಘಕಾಲದ ಮಾನಸಿಕ ಒತ್ತಡವು ರಕ್ತದೊತ್ತಡದ ಮಟ್ಟವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ನಾವು ಅತಿಯಾಗಿ ಯೋಚಿಸಿದಾಗ ಅಥವಾ ಆತಂಕಕ್ಕೆ ಒಳಗಾದಾಗ ನಮ್ಮ ದೇಹವು ‘ಫೈಟ್ ಆರ್ ಫ್ಲೈಟ್’ ಪ್ರತಿಕ್ರಿಯೆಯನ್ನು ನೀಡುತ್ತದೆ. ಈ ಸಮಯದಲ್ಲಿ ದೇಹದಲ್ಲಿ ಅಡ್ರಿನಾಲಿನ್ ಮತ್ತು ಕಾರ್ಟಿಸೋಲ್ ಎಂಬ ಹಾರ್ಮೋನುಗಳು ಬಿಡುಗಡೆಯಾಗುತ್ತವೆ. ಈ ಹಾರ್ಮೋನುಗಳು:
ಹೃದಯ ಬಡಿತವನ್ನು ವೇಗಗೊಳಿಸುತ್ತವೆ.
ರಕ್ತನಾಳಗಳನ್ನು ಕಿರಿದಾಗಿಸುತ್ತವೆ.
ತತ್ಕಾಲಿಕವಾಗಿ ರಕ್ತದೊತ್ತಡವನ್ನು ಹೆಚ್ಚಿಸುತ್ತವೆ.
ಒಂದು ವೇಳೆ ನೀವು ದಿನವಿಡೀ ಅತಿಯಾಗಿ ಯೋಚಿಸುತ್ತಿದ್ದರೆ, ನಿಮ್ಮ ರಕ್ತದೊತ್ತಡ ಪದೇ ಪದೇ ಏರಿಕೆಯಾಗಿ ಕಾಲಕ್ರಮೇಣ ಅದು ‘ಹೈಪರ್ ಟೆನ್ಶನ್’ ಅಥವಾ ದೀರ್ಘಕಾಲದ ರಕ್ತದೊತ್ತಡಕ್ಕೆ ದಾರಿ ಮಾಡಿಕೊಡಬಹುದು.
ಹೆಚ್ಚು ಯೋಚನೆ ಮಾಡುವವರು ಒತ್ತಡದಿಂದ ಮುಕ್ತಿ ಪಡೆಯಲು ಧೂಮಪಾನ, ಅತಿಯಾದ ಮದ್ಯಪಾನ ಅಥವಾ ಸರಿಯಾದ ನಿದ್ದೆ ಮಾಡದಿರುವಂತಹ ಅಭ್ಯಾಸಗಳಿಗೆ ಬಲಿಯಾಗುತ್ತಾರೆ. ಈ ಜೀವನಶೈಲಿಯ ಬದಲಾವಣೆಗಳು ನೇರವಾಗಿ ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರಿ, ಬಿಪಿ ಹೆಚ್ಚಾಗಲು ಕಾರಣವಾಗುತ್ತವೆ.



