July 10, 2026
Friday, July 10, 2026
spot_img

CINE | ಬಾಲಿವುಡ್‌ನಲ್ಲಿ ಬಿರುಗಾಳಿ ಎಬ್ಬಿಸಲು ಸಜ್ಜಾದ ರಣವೀರ್: 300 ಕೋಟಿ ಬಜೆಟ್‌ನ ಚಿತ್ರಕ್ಕೆ ಮುಹೂರ್ತ ಫಿಕ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

‘ಧುರಂಧರ್’ ಹಾಗೂ ‘ಧುರಂಧರ್ 2’ ಚಿತ್ರಗಳ ಭರ್ಜರಿ ಯಶಸ್ಸಿನ ನಂತರ ಬಾಲಿವುಡ್ ಸೂಪರ್ ಸ್ಟಾರ್ ರಣವೀರ್ ಸಿಂಗ್ ಅವರ ಮುಂದಿನ ಸಿನಿಮಾಗಳ ಬಗ್ಗೆ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿದೆ. ಅದರಲ್ಲೂ ವಿಶೇಷವಾಗಿ ನಿರ್ದೇಶಕ ಜೈ ಮೆಹ್ತಾ ಅವರೊಂದಿಗೆ ರಣವೀರ್ ಕೈಜೋಡಿಸಿರುವ ‘ಪ್ರಳಯ್’ ಸಿನಿಮಾ ಈಗ ಸುದ್ದಿಯಲ್ಲಿದೆ. ಈ ಚಿತ್ರದ ಬಗ್ಗೆ ಹರಿದಾಡುತ್ತಿದ್ದ ಅಡೆತಡೆಗಳ ವದಂತಿಗಳಿಗೆ ಈಗ ತೆರೆ ಬಿದ್ದಿದ್ದು, ಚಿತ್ರದ ಶೂಟಿಂಗ್ ಅಪ್‌ಡೇಟ್ ಹೊರಬಿದ್ದಿದೆ.

ಕಳೆದ ಕೆಲವು ದಿನಗಳಿಂದ ರಣವೀರ್ ಸಿಂಗ್ ಮತ್ತು ನಿರ್ದೇಶಕ ಜೈ ಮೆಹ್ತಾ ನಡುವೆ ಸೃಜನಾತ್ಮಕ ಭಿನ್ನಾಭಿಪ್ರಾಯಗಳಿವೆ, ಇದರಿಂದ ‘ಪ್ರಳಯ್’ ಸಿನಿಮಾ ಸ್ಥಗಿತಗೊಂಡಿದೆ ಎಂಬ ಸುದ್ದಿಗಳು ಹರಿದಾಡಿದ್ದವು. ಆದರೆ, ಈ ಎಲ್ಲಾ ಊಹಾಪೋಹಗಳು ಸುಳ್ಳು ಎಂದು ಚಿತ್ರತಂಡದ ಆಪ್ತ ಮೂಲಗಳು ಸ್ಪಷ್ಟಪಡಿಸಿವೆ. ಸ್ಕ್ರಿಪ್ಟ್ ಕೆಲಸಗಳು ಈಗಾಗಲೇ ಅಂತಿಮಗೊಂಡಿದ್ದು, ಸಿನಿಮಾ ಪ್ರೀ-ಪ್ರೊಡಕ್ಷನ್ ಹಂತಕ್ಕೆ ತಲುಪಿದೆ. ಮಾಹಿತಿ ಪ್ರಕಾರ, ಆಗಸ್ಟ್ 2026 ರಿಂದ ಈ ಸಿನಿಮಾದ ಚಿತ್ರೀಕರಣ ಅಧಿಕೃತವಾಗಿ ಆರಂಭವಾಗಲಿದೆ.

ಭಾರತೀಯ ಚಿತ್ರರಂಗದಲ್ಲಿ ಈ ಹಿಂದೆ ಎಂದೂ ಕಂಡಿರದ ಮಟ್ಟದಲ್ಲಿ ‘ಪ್ರಳಯ್’ ಸಿನಿಮಾ ಮೂಡಿಬರಲಿದೆ. ಇದು ದುಬಾರಿ ಬಜೆಟ್‌ನ ಜಾಂಬಿ ಶೈಲಿಯ ಸಿನಿಮಾ ಆಗಿದ್ದು, ಸುಮಾರು 300 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಹಿಂದಿ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ದುಬಾರಿ ಜಾಂಬಿ ಸಿನಿಮಾ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಲಿದೆ.

‘ಲೂಟೇರೆ’ ಖ್ಯಾತಿಯ ವಿಶಾಲ್ ಕಪೂರ್ ಮತ್ತು ಜೈ ಮೆಹ್ತಾ ಜಂಟಿಯಾಗಿ ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ. ರಣವೀರ್ ಸಿಂಗ್ ಈ ಚಿತ್ರಕ್ಕಾಗಿ ಸಂಪೂರ್ಣ ವಿಭಿನ್ನ ಹಾಗೂ ವಿಶೇಷ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ‘ಡಾನ್ 3’ ಚಿತ್ರದ ಬಗ್ಗೆ ಇನ್ನೂ ಗೊಂದಲಗಳಿರುವ ಬೆನ್ನಲ್ಲೇ, ‘ಪ್ರಳಯ್’ ಸಿನಿಮಾ ವೇಗ ಪಡೆದುಕೊಂಡಿರುವುದು ರಣವೀರ್ ಅಭಿಮಾನಿಗಳಲ್ಲಿ ಹೊಸ ಭರವಸೆ ಮೂಡಿಸಿದೆ. ಚಿತ್ರವು 2027 ರ ವೇಳೆಗೆ ಬೆಳ್ಳಿತೆರೆಯ ಮೇಲೆ ಬರಲಿದೆ ಎಂದು ಅಂದಾಜಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !