September 13, 2026
Sunday, September 13, 2026
spot_img

ಸ್ಟ್ರೈಕ್ ರೇಟ್ ಟೀಕಾಕಾರರಿಗೆ ಬ್ಯಾಟ್ ಮೂಲಕವೇ ಉತ್ತರಿಸಿದ ಕೆಎಲ್ ರಾಹುಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂಡಿಯನ್ ಪ್ರೀಮಿಯರ್ ಲೀಗ್‌ನ 43ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ ರೋಚಕ ಜಯ ಸಾಧಿಸಿದೆ. ಜೈಪುರದ ಸವಾಯಿ ಮಾನ್​ಸಿಂಗ್ ಸ್ಟೇಡಿಯಂನಲ್ಲಿ ನಡೆದ ಹೈ-ಸ್ಕೋರಿಂಗ್ ಪಂದ್ಯದಲ್ಲಿ ಡೆಲ್ಲಿ ಪಡೆ 7 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ ನಿಗದಿತ 20 ಓವರ್​ಗಳಲ್ಲಿ 225 ರನ್​ಗಳ ಬೃಹತ್ ಮೊತ್ತವನ್ನು ಪೇರಿಸಿತ್ತು. ಈ ಕಠಿಣ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಆರಂಭಿಕರಾದ ಕೆಎಲ್ ರಾಹುಲ್ ಮತ್ತು ಪಾತುಮ್ ನಿಸ್ಸಂಕಾ ಸ್ಫೋಟಕ ಆರಂಭ ನೀಡಿದರು.

ಡೆಲ್ಲಿ ತಂಡದ ಪರ ಜವಾಬ್ದಾರಿಯುತ ಆಟವಾಡಿದ ಕೆಎಲ್ ರಾಹುಲ್ ಕೇವಲ 40 ಎಸೆತಗಳಲ್ಲಿ 75 ರನ್ ಸಿಡಿಸಿದರು. ಇವರ ಈ ಅಮೋಘ ಇನ್ನಿಂಗ್ಸ್‌ನಲ್ಲಿ 5 ಆಕರ್ಷಕ ಸಿಕ್ಸರ್ ಹಾಗೂ 6 ಬೌಂಡರಿಗಳಿದ್ದವು. ರಾಹುಲ್ ಅವರ ಈ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ 19.1 ಓವರ್​ಗಳಲ್ಲಿ 226 ರನ್ ಬಾರಿಸುವ ಮೂಲಕ ಗುರಿ ತಲುಪಿತು.

ಪಂದ್ಯ ಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಕೆಎಲ್ ರಾಹುಲ್, “ವೈಯಕ್ತಿಕ ದಾಖಲೆಗಳು ಸಂತೋಷ ನೀಡುತ್ತವೆ, ಆದರೆ ತಂಡದ ಗೆಲುವು ಎಲ್ಲಕ್ಕಿಂತ ಮಿಗಿಲು. ತಂಡ ಸೋತಾಗ ನಮ್ಮ ವೈಯಕ್ತಿಕ ರನ್‌ಗಳಿಗೆ ಬೆಲೆ ಇರುವುದಿಲ್ಲ. ಈ ಗೆಲುವು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ,” ಎಂದು ಸಂತಸ ಹಂಚಿಕೊಂಡರು.

ತಮ್ಮ ಸ್ಟ್ರೈಕ್ ರೇಟ್ ಬಗ್ಗೆ ಕೇಳಿ ಬರುತ್ತಿದ್ದ ಟೀಕೆಗಳಿಗೆ ಪ್ರತಿಕ್ರಿಯಿಸಿದ ರಾಹುಲ್, “ಕಳೆದ ಕೆಲವು ವರ್ಷಗಳಿಂದ ನನ್ನ ಸ್ಟ್ರೈಕ್ ರೇಟ್ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿತ್ತು. ಈ ಸೀಸನ್‌ನಲ್ಲಿ ಆಧುನಿಕ ಟಿ20 ಕ್ರಿಕೆಟ್‌ನ ಅಗತ್ಯಕ್ಕೆ ತಕ್ಕಂತೆ ವೇಗವಾಗಿ ರನ್ ಗಳಿಸಲು ನಾನು ಹೆಚ್ಚಿನ ಗಮನ ನೀಡುತ್ತಿದ್ದೇನೆ,” ಎಂದರು.

ಜೊತೆಗೆ, ಆರಂಭಿಕ ಜೊತೆಗಾರ ಪಾತುಮ್ ನಿಸ್ಸಂಕಾ ಅವರ ಬ್ಯಾಟಿಂಗ್ ಶೈಲಿಯನ್ನು ಹೊಗಳಿದ ರಾಹುಲ್, 220ಕ್ಕೂ ಅಧಿಕ ರನ್ ಬೆನ್ನಟ್ಟುವಾಗ ಪವರ್‌ಪ್ಲೇನಲ್ಲಿ ಅಂತಹ ಸ್ಫೋಟಕ ಆರಂಭ ಅನಿವಾರ್ಯವಾಗಿತ್ತು ಎಂದು ತಿಳಿಸಿದರು. ಸತತ ಎರಡು ಸೋಲುಗಳ ಬಳಿಕ ಈ ಗೆಲುವು ಕಂಡಿರುವ ಡೆಲ್ಲಿ ಕ್ಯಾಪಿಟಲ್ಸ್, ಮುಂದಿನ ಪಂದ್ಯಗಳಲ್ಲೂ ಇದೇ ಲಯ ಮುಂದುವರಿಸುವ ವಿಶ್ವಾಸದಲ್ಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !