ಬೇಸಿಗೆಯ ಬಿಸಿಲಿನಲ್ಲಿ ಅಥವಾ ಸ್ನೇಹಿತರ ಜೊತೆ ಕಾಲ ಕಳೆಯುವಾಗ ಕೈಯಲ್ಲೊಂದು ಚಿಪ್ಸ್ ಪ್ಯಾಕೆಟ್ ಮತ್ತು ಗ್ಲಾಸಿನಲ್ಲಿ ತಂಪು ಪಾನೀಯ ಇರುವುದು ಈಗಿನ ಯುವ ಪೀಳಿಗೆಗೆ ಅಚ್ಚುಮೆಚ್ಚು. ಆದರೆ, ನಾಲಿಗೆಗೆ ರುಚಿ ನೀಡುವ ಈ ಆರಾಮದಾಯಕ ಆಹಾರ ಸಂಯೋಜನೆ ನಿಮ್ಮ ದೇಹದೊಳಗೆ ‘ನಿಧಾನ ವಿಷ’ವಾಗಿ ಕೆಲಸ ಮಾಡುತ್ತದೆ ಎಂಬುದು ನಿಮಗೆ ತಿಳಿದಿದೆಯೇ? ಆರೋಗ್ಯ ತಜ್ಞರ ಪ್ರಕಾರ ಈ ಅಭ್ಯಾಸವು ಹಲವು ದೀರ್ಘಕಾಲದ ಕಾಯಿಲೆಗಳಿಗೆ ದಾರಿ ಮಾಡಿಕೊಡುತ್ತದೆ.
ತಂಪು ಪಾನೀಯಗಳು ಬಾಯಾರಿಕೆಯನ್ನು ತಣಿಸುತ್ತವೆ ಎಂದು ನಾವು ಭಾವಿಸುತ್ತೇವೆ. ಆದರೆ ವಾಸ್ತವದಲ್ಲಿ ಅವುಗಳಲ್ಲಿರುವ ಸಕ್ಕರೆ ಮತ್ತು ಕೆಫೀನ್ ಅಂಶವು ದೇಹದಲ್ಲಿರುವ ನೀರನ್ನು ಹೊರಹಾಕುವಂತೆ ಮಾಡುತ್ತದೆ. ಇನ್ನು ಚಿಪ್ಸ್ನಲ್ಲಿ ಅತಿಯಾದ ಸೋಡಿಯಂ (ಉಪ್ಪು) ಇರುತ್ತದೆ. ಈ ಉಪ್ಪು ದೇಹದಲ್ಲಿನ ತೇವಾಂಶವನ್ನು ಹೀರಲ್ಪಡುವುದರಿಂದ ನಿಮ್ಮ ದೇಹ ಬೇಗನೆ ನಿರ್ಜಲೀಕರಣಕ್ಕೆ ಒಳಗಾಗುತ್ತದೆ.
ಚಿಪ್ಸ್ನಲ್ಲಿರುವ ಅತಿಯಾದ ಉಪ್ಪು ಮತ್ತು ಕೋಲ್ಡ್ ಡ್ರಿಂಕ್ಸ್ನಲ್ಲಿರುವ ಸಕ್ಕರೆಯ ಪ್ರಮಾಣ ಒಟ್ಟಾಗಿ ಸೇರಿದಾಗ ರಕ್ತದೊತ್ತಡ (BP) ದಿಢೀರನೆ ಏರಿಕೆಯಾಗುತ್ತದೆ. ಇದು ದೀರ್ಘಕಾಲದಲ್ಲಿ ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗಬಹುದು. ಅಲ್ಲದೆ, ಚಿಪ್ಸ್ ತಯಾರಿಸಲು ಬಳಸುವ ‘ಟ್ರಾನ್ಸ್ ಫ್ಯಾಟ್’ ರಕ್ತನಾಳಗಳಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ.
ದೇಹದಲ್ಲಿ ಸೋಡಿಯಂ ಪ್ರಮಾಣ ಹೆಚ್ಚಾದಾಗ, ಅದನ್ನು ಹೊರಹಾಕಲು ಕಿಡ್ನಿಗಳು ಅತಿಯಾಗಿ ಕೆಲಸ ಮಾಡಬೇಕಾಗುತ್ತದೆ. ಇದರೊಂದಿಗೆ ತಂಪು ಪಾನೀಯಗಳಲ್ಲಿರುವ ರಾಸಾಯನಿಕಗಳು ಕಿಡ್ನಿಗಳ ಕಾರ್ಯಕ್ಷಮತೆಯನ್ನು ಕುಂಠಿತಗೊಳಿಸಿ, ಭವಿಷ್ಯದಲ್ಲಿ ಕಿಡ್ನಿ ಸ್ಟೋನ್ ಅಥವಾ ಇತರ ಸಮಸ್ಯೆಗಳಿಗೆ ಕಾರಣವಾಗಬಹುದು.
ಈ ಕಾಂಬಿನೇಷನ್ನಲ್ಲಿ ‘ಎಂಪ್ಟಿ ಕ್ಯಾಲೋರಿ’ ಅಧಿಕವಾಗಿರುತ್ತದೆ. ಅಂದರೆ ಇದರಲ್ಲಿ ಯಾವುದೇ ಪೌಷ್ಟಿಕಾಂಶವಿಲ್ಲದೆ ಕೇವಲ ಕ್ಯಾಲೋರಿಗಳು ಮಾತ್ರ ಇರುತ್ತವೆ. ಇದು ದೇಹದಲ್ಲಿ ಕೊಬ್ಬನ್ನು ಸಂಗ್ರಹಿಸಿ ಬೊಜ್ಜು ಹೆಚ್ಚಿಸುತ್ತದೆ. ಅಲ್ಲದೆ, ಸಕ್ಕರೆಯ ಅತಿಯಾದ ಸೇವನೆಯು ಇನ್ಸುಲಿನ್ ಮಟ್ಟವನ್ನು ಏರುಪೇರು ಮಾಡಿ ಟೈಪ್-2 ಮಧುಮೇಹಕ್ಕೆ ಆಹ್ವಾನ ನೀಡುತ್ತದೆ.



