ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ 2026ರ ಸೀಸನ್‌ನಲ್ಲಿ ಗಾಯದ ಸಮಸ್ಯೆಯಿಂದಾಗಿ ರೋಹಿತ್ ಶರ್ಮಾ ಸದ್ಯ ಮೈದಾನದಿಂದ ಹೊರಗುಳಿದಿರಬಹುದು, ಆದರೆ ತಂಡದ ಮೇಲಿನ ಅವರ ಪ್ರಭಾವ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಮಂಡಿರಜ್ಜು ಗಾಯಕ್ಕೆ ತುತ್ತಾದ ಹಿಟ್ಮ್ಯಾನ್, ಪ್ಲೇಯಿಂಗ್ ಇಲೆವೆನ್‌ನಲ್ಲಿ ಇಲ್ಲದಿದ್ದರೂ ಡಗೌಟ್‌ನಲ್ಲಿ ಕುಳಿತು ತಂಡಕ್ಕೆ ಬೆನ್ನೆಲುಬಾಗಿ ನಿಲ್ಲುತ್ತಿದ್ದಾರೆ.
ಶನಿವಾರ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಹೈವೋಲ್ಟೇಜ್ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರ ಕ್ರಿಕೆಟ್ ಬುದ್ಧಿವಂತಿಕೆ ಮತ್ತೊಮ್ಮೆ ಸಾಬೀತಾಯಿತು. ಸಿಎಸ್‌ಕೆ ಆರಂಭಿಕ ಆಟಗಾರ ಉರ್ವಿಲ್ ಪಟೇಲ್ ಕೇವಲ 12 ಎಸೆತಗಳಲ್ಲಿ 24 ರನ್ ಚಚ್ಚಿ ಮುಂಬೈ ಬೌಲರ್‌ಗಳನ್ನು ಕಂಗಾಲು ಮಾಡಿದ್ದರು. ಈ ಅಪಾಯಕಾರಿ ಹಂತದಲ್ಲಿ ರೋಹಿತ್ ಶರ್ಮಾ ಡಗೌಟ್‌ನಿಂದಲೇ ನಾಯಕ ಹಾರ್ದಿಕ್ ಪಾಂಡ್ಯಗೆ ಸ್ಪಿನ್ ಬೌಲಿಂಗ್ ಬಳಸುವಂತೆ ಸನ್ನೆ ಮಾಡಿದರು.
ರೋಹಿತ್ ನೀಡಿದ ಸಲಹೆಯಂತೆ ಹಾರ್ದಿಕ್ ತಕ್ಷಣವೇ ಅಲ್ಲಾ ಅಜ್ನಾಫರ್ ಅವರಿಗೆ ಚೆಂಡು ನೀಡಿದರು. ರೋಹಿತ್ ಅಂದುಕೊಂಡಂತೆಯೇ ನಾಲ್ಕನೇ ಎಸೆತದಲ್ಲಿ ಉರ್ವಿಲ್ ಪಟೇಲ್ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಈ ಕುತೂಹಲಕಾರಿ ಕ್ಷಣವನ್ನು ಸ್ಟಾರ್ ಸ್ಪೋರ್ಟ್ಸ್ ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದು, ಫ್ಯಾನ್ಸ್ ರೋಹಿತ್ ಅವರ ‘ಕ್ಯಾಪ್ಟನ್ಸಿ ಮೈಂಡ್‌ಸೆಟ್’ ಅನ್ನು ಕೊಂಡಾಡುತ್ತಿದ್ದಾರೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತು. ಒಂದು ಹಂತದಲ್ಲಿ (11ನೇ ಓವರ್) 99 ರನ್ ಗಳಿಸಿದ್ದ ಮುಂಬೈ, ದೊಡ್ಡ ಮೊತ್ತದ ನಿರೀಕ್ಷೆಯಲ್ಲಿತ್ತು. ಆದರೆ ಸಿಎಸ್‌ಕೆ ಬೌಲರ್‌ಗಳ ಸಂಘಟಿತ ಹೋರಾಟದಿಂದಾಗಿ ಮುಂಬೈ ಮಧ್ಯಮ ಕ್ರಮಾಂಕ ಕುಸಿಯಿತು.
ಸಣ್ಣ ಗುರಿಯನ್ನು ಬೆನ್ನಟ್ಟಿದ ಸಿಎಸ್‌ಕೆ ತಂಡವು 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ನಾಯಕ ರುತುರಾಜ್ ಗಾಯಕ್ವಾಡ್ (ಅಜೇಯ 67) ಮತ್ತು ಕಾರ್ತಿಕ್ ಶರ್ಮಾ (ಅಜೇಯ 54) ಅವರ ಅಮೋಘ 98 ರನ್‌ಗಳ ಜೊತೆಯಾಟ ಚೆಪಾಕ್ ಕ್ರೀಡಾಂಗಣದಲ್ಲಿ ಅಭಿಮಾನಿಗಳನ್ನು ರಂಜಿಸಿತು.
ರೋಹಿತ್ ಶರ್ಮಾ ಕೇವಲ ಆಟಗಾರನಲ್ಲ, ಮುಂಬೈ ಇಂಡಿಯನ್ಸ್ ತಂಡಕ್ಕೆ 5 ಪ್ರಶಸ್ತಿಗಳನ್ನು ತಂದುಕೊಟ್ಟ ಯಶಸ್ವಿ ನಾಯಕ. 2013 ರಿಂದ 2023 ರವರೆಗೆ ನಾಯಕತ್ವದ ಜವಾಬ್ದಾರಿ ಹೊತ್ತಿದ್ದ ಅವರಿಗೆ, 2024 ರಲ್ಲಿ ಹಾರ್ದಿಕ್ ಪಾಂಡ್ಯ ಉತ್ತರಾಧಿಕಾರಿಯಾದರು. ಆದರೂ, ತಂಡದ ಕಷ್ಟದ ಸಮಯದಲ್ಲಿ ರೋಹಿತ್ ಅವರ ಅನುಭವ ಇಂದಿಗೂ ಮುಂಬೈಗೆ ವರದಾನವಾಗಿದೆ.



