ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ 2026ರ ಅಂಕಪಟ್ಟಿಯಲ್ಲಿ ಭದ್ರವಾದ ಸ್ಥಾನದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಟೂರ್ನಿಯ ಅತಿ ನಿರ್ಣಾಯಕ ಪಂದ್ಯಗಳಿಗೂ ಮುನ್ನ ಒಂದು ಪುಟ್ಟ ವಿರಾಮ ಪಡೆದುಕೊಂಡಿದೆ. ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದ ಬಳಿಕ ಸಿಕ್ಕ ಒಂದು ವಾರದ ಬಿಡುವಿನ ಸಮಯವನ್ನು ತಂಡವು ಸದುಪಯೋಗಪಡಿಸಿಕೊಳ್ಳುತ್ತಿದ್ದು, ಆಟಗಾರರು ಮಾನಸಿಕ ಹಾಗೂ ದೈಹಿಕವಾಗಿ ಸಜ್ಜಾಗಲು ಮಾಲ್ಡೀವ್ಸ್ ಪ್ರವಾಸ ಕೈಗೊಂಡಿದ್ದಾರೆ.
ಸತತ ಪ್ರಯಾಣ ಮತ್ತು ಹೈ-ವೋಲ್ಟೇಜ್ ಪಂದ್ಯಗಳ ಒತ್ತಡದಿಂದ ಆಟಗಾರರಿಗೆ ಮುಕ್ತಿ ನೀಡಲು ಮ್ಯಾನೇಜ್‌ಮೆಂಟ್ ಈ ಮಿನಿ ವೆಕೇಶನ್ ಆಯೋಜಿಸಿದೆ. ನ್ಯೂಝಿಲೆಂಡ್‌ನ ವೇಗಿ ಜೇಕಬ್ ಡಫಿ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಮಾಲ್ಡೀವ್ಸ್‌ನ ಸುಂದರ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಈ ವಿಷಯವನ್ನು ಅಭಿಮಾನಿಗಳಿಗೆ ತಿಳಿಸಿದ್ದಾರೆ. ತಂಡದ ಬಹುತೇಕ ಸದಸ್ಯರು ಈ ಪ್ರವಾಸದಲ್ಲಿದ್ದರೂ, ಸ್ಟಾರ್ ಓಪನರ್ ಫಿಲ್ ಸಾಲ್ಟ್ ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳುತ್ತಿರುವ ಕಾರಣ ಈ ಟ್ರಿಪ್‌ನಿಂದ ದೂರ ಉಳಿದಿದ್ದಾರೆ ಎನ್ನಲಾಗಿದೆ.
ಪ್ರಸ್ತುತ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಆರ್ಸಿಬಿ, ಆಡಿದ 9 ಪಂದ್ಯಗಳಲ್ಲಿ 6 ಜಯ ಸಾಧಿಸಿ ಒಟ್ಟು 12 ಅಂಕಗಳನ್ನು ಕಲೆಹಾಕಿದೆ. ಅಧಿಕೃತವಾಗಿ ಪ್ಲೇ-ಆಫ್ ಪ್ರವೇಶಿಸಲು ತಂಡಕ್ಕೆ ಇನ್ನು ಕೇವಲ ಎರಡು ಗೆಲುವುಗಳ ಅವಶ್ಯಕತೆಯಿದೆ. ಈ ವಿಶ್ರಾಂತಿಯು ಆಟಗಾರರಲ್ಲಿ ಹೊಸ ಉತ್ಸಾಹ ತುಂಬಲಿದ್ದು, ಮುಂದಿನ ಪಂದ್ಯಗಳಲ್ಲಿ ಮತ್ತಷ್ಟು ಬಲವಾಗಿ ಮೈದಾನಕ್ಕಿಳಿಯಲು ಸಹಕಾರಿಯಾಗಲಿದೆ.



