ಬೇಸಿಗೆಯ ಬಿಸಿಲಿನಿಂದ ಪಾರಾಗಲು ನಾವು ಎಸಿ ಮೊರೆ ಹೋಗುತ್ತೇವೆ. ಆದರೆ ಎಸಿ ಯಂತ್ರದ ಸರಿಯಾದ ನಿರ್ವಹಣೆ ಇಲ್ಲದಿದ್ದರೆ ಅದು ಬಾಂಬ್‌ನಂತೆ ಸ್ಫೋಟಿಸುವ ಅಪಾಯವಿರುತ್ತದೆ. ಎಸಿ ಸ್ಫೋಟಕ್ಕೆ ಪ್ರಮುಖ ಕಾರಣಗಳು ಇಲ್ಲಿವೆ:
ಎಸಿಯಲ್ಲಿ ಬಳಸುವ ಶೀತಕ ದ್ರವ ಅಥವಾ ಗ್ಯಾಸ್ ಸೋರಿಕೆಯಾದಾಗ, ಅದು ಸಂಕುಚಿತಗೊಂಡು ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆ ಇರುತ್ತದೆ. ವಿಶೇಷವಾಗಿ ಹಳೆಯ ಎಸಿಗಳಲ್ಲಿ ಪೈಪ್‌ಗಳು ತುಕ್ಕು ಹಿಡಿದು ಗ್ಯಾಸ್ ಸೋರಿಕೆಯಾಗುವುದು ಹೆಚ್ಚು.
ಎಸಿ ಫಿಲ್ಟರ್‌ಗಳಲ್ಲಿ ಮತ್ತು ಕಾಯಿಲ್‌ಗಳಲ್ಲಿ ಧೂಳು ತುಂಬಿಕೊಂಡಾಗ ಗಾಳಿಯ ಸಂಚಾರಕ್ಕೆ ಅಡಚಣೆಯಾಗುತ್ತದೆ. ಇದರಿಂದ ಎಸಿ ಇಂಜಿನ್ ಮೇಲೆ ಹೆಚ್ಚಿನ ಒತ್ತಡ ಬಿದ್ದು, ಯಂತ್ರವು ಅತಿಯಾಗಿ ಕಾಯುತ್ತದೆ. ಇದು ಸ್ಫೋಟಕ್ಕೆ ಮುಖ್ಯ ಕಾರಣಗಳಲ್ಲಿ ಒಂದಾಗಿದೆ.
ಹಳೆಯ ವೈರಿಂಗ್, ಸಡಿಲವಾದ ಕನೆಕ್ಷನ್‌ಗಳು ಅಥವಾ ವೋಲ್ಟೇಜ್ ಏರಿಳಿತಗಳಿಂದಾಗಿ ಶಾರ್ಟ್ ಸರ್ಕ್ಯೂಟ್ ಸಂಭವಿಸಬಹುದು. ಎಸಿ ಚಾಲನೆಯಲ್ಲಿರುವಾಗ ಅತಿಯಾದ ವಿದ್ಯುತ್ ಪ್ರವಾಹ ಉಂಟಾದರೆ ವೈರ್‌ಗಳು ಕರಗಿ ಬೆಂಕಿ ಕಾಣಿಸಿಕೊಳ್ಳಬಹುದು.
ಎಸಿಯ ಹೃದಯ ಭಾಗವಾದ ಕಂಪ್ರೆಸರ್ ಅತಿಯಾಗಿ ಬಿಸಿಯಾದಾಗ ಅಥವಾ ಅದರಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಾಗ ಅದು ಒತ್ತಡವನ್ನು ತಡೆದುಕೊಳ್ಳಲಾರದೆ ಸ್ಫೋಟಗೊಳ್ಳುತ್ತದೆ.
ವಿಶ್ರಾಂತಿ ಇಲ್ಲದೆ ದಿನದ 24 ಗಂಟೆಯೂ ಎಸಿ ಚಾಲನೆ ಮಾಡುವುದರಿಂದ ಯಂತ್ರದ ಭಾಗಗಳು ಅತಿಯಾಗಿ ಬಿಸಿಯಾಗುತ್ತವೆ. ಇದು ಯಂತ್ರದ ಆಯಸ್ಸನ್ನು ಕಡಿಮೆ ಮಾಡುವುದಲ್ಲದೆ ಅಪಾಯವನ್ನೂ ಆಹ್ವಾನಿಸುತ್ತದೆ.
ಸುರಕ್ಷತೆಗಾಗಿ ಈ ಕ್ರಮಗಳನ್ನು ಅನುಸರಿಸಿ:
ವರ್ಷಕ್ಕೆ ಕನಿಷ್ಠ ಎರಡು ಬಾರಿಯಾದರೂ ಅಧಿಕೃತ ತಂತ್ರಜ್ಞರಿಂದ ಎಸಿ ಸರ್ವಿಸ್ ಮಾಡಿಸಿ.
ಎಸಿಗೆ ಉತ್ತಮ ಗುಣಮಟ್ಟದ ವೈರ್ ಮತ್ತು ಎಂಸಿಬಿ ಬಳಸಿ.
ಗ್ಯಾಸ್ ಸೋರಿಕೆಯ ವಾಸನೆ ಕಂಡುಬಂದಲ್ಲಿ ತಕ್ಷಣ ಎಸಿ ಆಫ್ ಮಾಡಿ ತಜ್ಞರನ್ನು ಸಂಪರ್ಕಿಸಿ.
ಎಸಿಯನ್ನು ಸತತವಾಗಿ ಬಳಸುವ ಬದಲು ಮಧ್ಯೆ ಸ್ವಲ್ಪ ಸಮಯ ವಿರಾಮ ನೀಡಿ.
ಎಸಿಯ ಹೊರಭಾಗದ ಯಂತ್ರಕ್ಕೆ ಗಾಳಿಯಾಡಲು ಸರಿಯಾದ ಜಾಗವಿರಲಿ ಮತ್ತು ಅದರ ಮೇಲೆ ನೇರ ಬಿಸಿಲು ಬೀಳದಂತೆ ನೋಡಿಕೊಳ್ಳಿ.



