ಹೊಸದಿಗಂತ ಡಿಜಿಟಲ್ ಡೆಸ್ಕ್:
ನವೆಂಬರ್ 1ರ ಭಾನುವಾರ ದೆಹಲಿಯಲ್ಲಿ ನಡೆಯಲಿರುವ ‘ಇಂಡಿಯಾ’ (INDIA) ಒಕ್ಕೂಟದ ಬೃಹತ್ ಜಂಟಿ ಪ್ರತಿಭಟನಾ ಸಮಾವೇಶವು ದೆಹಲಿ ಇತಿಹಾಸದಲ್ಲೇ ಅತಿ ದೊಡ್ಡ ರ‍್ಯಾಲಿಗಳಲ್ಲಿ ಒಂದಾಗಲಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಐತಿಹಾಸಿಕ ಸಮಾವೇಶದಲ್ಲಿ ಪಾಲ್ಗೊಳ್ಳಲು ದೇಶದ ಮೂಲೆ ಮೂಲೆಗಳಿಂದ ಲಕ್ಷಾಂತರ ಜನರು ಈಗಾಗಲೇ ರಾಜಧಾನಿ ದೆಹಲಿಯತ್ತ ಧಾವಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
“ವಿಪಕ್ಷಗಳ ಹೋರಾಟವನ್ನು ಹತ್ತಿಕ್ಕಲು ಎಷ್ಟೇ ಅಡೆತಡೆಗಳನ್ನು ಸೃಷ್ಟಿಸಿದರೂ, ನಾಳಿನ ರ‍್ಯಾಲಿಯನ್ನು ಯಶಸ್ವಿಯಾಗಿ ನಡೆಸಿ ತೋರಿಸಲಿದ್ದೇವೆ” ಎಂದು ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಚುನಾವಣಾ ಆಯುಕ್ತರ ವಜಾ ನೋಟಿಸ್ ತಿರಸ್ಕಾರಕ್ಕೆ ಆಕ್ರೋಶ
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧ ವಿರೋಧ ಪಕ್ಷಗಳು ತಂದಿದ್ದ ವಜಾ ನಿರ್ಣಯದ ನೋಟಿಸ್ ಅನ್ನು ತಿರಸ್ಕರಿಸಿರುವ ಸರ್ಕಾರದ ನಡೆಯನ್ನು ವೇಣುಗೋಪಾಲ್ ತೀವ್ರವಾಗಿ ಪ್ರಶ್ನಿಸಿದ್ದಾರೆ. “100ಕ್ಕೂ ಹೆಚ್ಚು ಸಂಸದರು ಸಹಿ ಮಾಡಿ ಸ್ಪೀಕರ್ ಅಥವಾ ಸಭಾಪತಿಗಳಿಗೆ ನೋಟಿಸ್ ನೀಡಿದಾಗ ಅದನ್ನು ಪರಿಗಣಿಸುವುದು ಕಡ್ಡಾಯ ನಿಯಮ. ಆದರೆ ಸರ್ಕಾರ ಅದನ್ನು ಕನಿಷ್ಠ ಸ್ವೀಕರಿಸಲೂ ಇಲ್ಲ, ಚರ್ಚೆಗೂ ಅವಕಾಶ ನೀಡದೆ ತಿರಸ್ಕರಿಸಿದೆ” ಎಂದು ಅವರು ಕಿಡಿಕಾರಿದ್ದಾರೆ.
ರಾಹುಲ್ ಗಾಂಧಿ ನೇತೃತ್ವದಲ್ಲಿ ಬೃಹತ್ ಪಾದಯಾತ್ರೆ
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ನವೆಂಬರ್ 1ರ ಭಾನುವಾರ ಮಧ್ಯಾಹ್ನ 12 ಗಂಟೆಗೆ ಕಾನ್ನಾಟ್ ಪ್ಲೇಸ್ ಬಳಿಯ ಮಿಂಟೋ ರೋಡ್ ಜಂಕ್ಷನ್‌ನಿಂದ ಅಜ್ಮೇರಿ ಗೇಟ್ ಮಾರ್ಗವಾಗಿ ರಾಮಲೀಲಾ ಮೈದಾನದವರೆಗೆ ಬೃಹತ್ ಪಾದಯಾತ್ರೆ ನಡೆಸಲಿದ್ದಾರೆ. ಈ ನಡಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅವರು ದೇಶದ ಜನತೆಗೆ ಕರೆ ನೀಡಿದ್ದಾರೆ. ಆದರೆ, ಈ ಪಾದಯಾತ್ರೆಗೆ ದೆಹಲಿ ಪೊಲೀಸರಿಂದ ಇನ್ನೂ ಅಧಿಕೃತ ಅನುಮತಿ ಸಿಕ್ಕಿಲ್ಲ ಎಂದು ಮೂಲಗಳು ತಿಳಿಸಿವೆ.
ಶುಕ್ರವಾರ ದೆಹಲಿಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಮುಂದೂಡಲ್ಪಟ್ಟಿದ್ದ ಮುಖ್ಯ ಚುನಾವಣಾ ಆಯುಕ್ತರ ವಿರುದ್ಧದ ಸಾರ್ವಜನಿಕ ವಜಾ ಆಂದೋಲನ ಕಾರ್ಯಕ್ರಮವನ್ನು ಶನಿವಾರ ಮಧ್ಯಾಹ್ನ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ನಡೆಸಲು ಒಕ್ಕೂಟದ ನಾಯಕರು ನಿರ್ಧರಿಸಿದ್ದಾರೆ.



