ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಮಳೆಯ ಪ್ರಭಾವದಿಂದ ತರಕಾರಿ ಬೆಲೆ ಏರಿಕೆಯಾಗಿದೆ. ಕಳೆದು ಹದಿನೈದು ದಿನಗಳ ಹಿಂದೆ ಇದ್ದ ಬೆಲೆ ಇದೀಗ ಡಬಲ್ ಆಗಿದೆ. ಜೀವನ ಮಾಡುವುದೇ ದುಬಾರಿ ಎಂದು ಮಧ್ಯಮವರ್ಗದ ಜನ ತಲೆ ಕೈ ಹೊತ್ತುಕೊಂಡು ಕೂರುವಂತೆ ಆಗಿದೆ.
ಅಕಾಲಿಕ ಮಳೆ, ಅಧಿಕ ಬಿಸಿಲಿನಿಂದಾಗಿ ಬೆಳೆಗಳು ಹಾಳಾಗುತ್ತಿವೆ, ಇದರಿಂದಾಗಿ ದರ ಹೆಚ್ಚಳವಾಗಿದ್ದು, ಪ್ರತಿ ತರಕಾರಿಯ ದರವೂ ದುಪ್ಪಟ್ಟಾಗಿದೆ.
ಬೀನ್ಸ್ ದರ 60 ರೂಪಾಯಿಯಿಂದ 160 ರೂಪಾಯಿಗೆ ಏರಿಕೆಯಾಗಿದ್ದರೆ, ಕ್ಯಾರೆಟ್, ಬೀಟ್ರೂಟ್ ಹಾಗೂ ಬೆಂಡೆಕಾಯಿಯಂತಹ ತರಕಾರಿಯ ಬೆಲೆ ಐವತ್ತು ರೂಪಾಯಿಯಷ್ಟು ಹೆಚ್ಚಾಗಿದೆ. ಬಿಸಿಲು ಹಾಗೂ ಮಳೆಯ ಕಣ್ಣಾಮುಚ್ಚಾಲೆಯಿಂದಾಗಿ ತರಕಾರಿಗಳು ಸರಿಯಾಗಿ ಬೆಳೆಯುತ್ತಿಲ್ಲ. ಬಂದಿರುವ ಬೆಳೆಗಳಲ್ಲಿಯೂ ಫಂಗಸ್ ತಾಗುತ್ತಿದೆ. ಇನ್ನು ಇದು ಮದುವೆಗಳ ಸೀಸನ್ ಆಗಿರುವುದರಿಂದ ಹೆಚ್ಚೆಚ್ಚು ತರಕಾರಿಗಳಿಗೆ ಬೇಡಿಕೆ ಇದೆ. ಇದರಿಂದ ಪೂರೈಕೆ ಕಡಿಮೆಯಾಗಿ ಬೇಡಿಕೆ ಹೆಚ್ಚಾಗಿದೆ.



