ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಂಚರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದಂತೆ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫಲಿತಾಂಶಗಳ ಬಗ್ಗೆ ತಮ್ಮ ಮುಕ್ತ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇರಳದ ಫಲಿತಾಂಶವು ಪಕ್ಷದ ನಿರೀಕ್ಷೆಯನ್ನು ಮೀರಿ ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಪಂಚರಾಜ್ಯಗಳ ಫಲಿತಾಂಶವನ್ನು ವಿಶ್ಲೇಷಿಸಿದ ಸಿಎಂ, “ಕೇರಳದಲ್ಲಿ ನಮ್ಮ ನಿರೀಕ್ಷೆಗಿಂತಲೂ ಹೆಚ್ಚಿನ ಯಶಸ್ಸು ಸಿಕ್ಕಿದೆ. ಅಲ್ಲಿನ ಮತದಾರರು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೇಲೆ ವಿಶ್ವಾಸವಿಟ್ಟಿದ್ದಾರೆ. ಆದರೆ ಅಸ್ಸಾಂನಲ್ಲಿ ನಮಗೆ ನಿರೀಕ್ಷಿತ ಫಲಿತಾಂಶ ಸಿಕ್ಕಿಲ್ಲ, ಅಲ್ಲಿನ ಸೋಲನ್ನು ನಾವು ವಿನಮ್ರವಾಗಿ ಒಪ್ಪಿಕೊಳ್ಳುತ್ತೇವೆ,” ಎಂದರು.
ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಅಸ್ತಿತ್ವದ ಬಗ್ಗೆ ಮಾತನಾಡಿದ ಅವರು, “ಬಂಗಾಳದಲ್ಲಿ ಮೊದಲಿನಿಂದಲೂ ನಮ್ಮ ಪ್ರಭಾವ ಅಷ್ಟಾಗಿ ಇರಲಿಲ್ಲ. ತಮಿಳುನಾಡು ಮತ್ತು ಬಂಗಾಳದ ಫಲಿತಾಂಶಗಳನ್ನು ಗಮನಿಸಿದರೆ ಅಲ್ಲಿ ಆಡಳಿತ ವಿರೋಧಿ ಅಲೆ ಕೆಲಸ ಮಾಡಿರಬಹುದು,” ಎಂದು ಅಭಿಪ್ರಾಯಪಟ್ಟರು.
ತಮಿಳುನಾಡು ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿರುವ ನಟ ವಿಜಯ್ ಅವರ ಬಗ್ಗೆಯೂ ಸಿದ್ದರಾಮಯ್ಯ ಸಾಫ್ಟ್ ಕಾರ್ನರ್ ತೋರಿದ್ದಾರೆ. ಚುನಾವಣೆಯಲ್ಲಿ ಗಮನಾರ್ಹ ಸಾಧನೆ ಮಾಡಿರುವ ವಿಜಯ್ ಅವರಿಗೆ ಮುಖ್ಯಮಂತ್ರಿಗಳು ಅಭಿನಂದನೆ ಸಲ್ಲಿಸಿದರು.



