ಹೊಸದಿಗಂತ ವರದಿ, ಮಡಿಕೇರಿ:
ಪಂಚ ರಾಜ್ಯಗಳ ಚುನಾವಣೆಗಳ ಪೈಕಿ 3 ರಾಜ್ಯಗಳಲ್ಲಿ ಬಿಜೆಪಿ ಅಭೂತಪೂರ್ವ ಗೆಲವು ಸಾಧಿಸಿದ್ದು, ಕರ್ನಾಟಕದಲ್ಲಿಯೂ 2028ರಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲು ಪ್ರೇರಣೆಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಕೊಡಗಿನ ಮಾದಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇ 9 ರಂದು ಚಿತ್ರದುರ್ಗದಲ್ಲಿ ಆಯೋಜಿತ ಯಡಿಯೂರಪ್ಪ ಅಭಿನಂದನೋತ್ಸವದ ಮೂಲಕ ಕರ್ನಾಟಕದಲ್ಲಿ ಬಿಜೆಪಿ ಚುನಾವಣಾ ರಣಕಹಳೆ ಊದಲಿದೆ ಎಂದರಲ್ಲದೆ, ಆ ವಿಜಯೋತ್ಸವದ ಬಳಿಕ ಕಾಂಗ್ರೆಸ್ ಸರ್ಕಾರದ ಪತನಕ್ಕೆ ದಿನಗಣನೆ ಪ್ರಾರಂಭಿಸಲಿದೆ ಎಂದರು.
ಕಳೆದ 15 ವರ್ಷಗಳ ಕಾಲ ಪಶ್ಚಿಮ ಬಂಗಾಳದಲ್ಲಿ ದುರಾಡಳಿತ ನಡೆಸಿದ್ದ ಮಮತಾ ಬ್ಯಾನರ್ಜಿಯ ಸರ್ವಾಧಿಕಾರವನ್ನು ಅಂತ್ಯಗೊಳಿಸಿದ ಮೋದಿ ಮತ್ತು ಅಮಿತ್ ಶಾ ಜೋಡಿಯ ಕಾರ್ಯತಂತ್ರ ಭಾರತೀಯರ ಮೆಚ್ಚುಗೆ ಗಳಿಸಿದೆ ಎಂದ ಬೊಮ್ಮಾಯಿ ಅವರು, ಕರ್ನಾಟಕದ ಉಪಚುನಾವಣೆಯ ಸಂದರ್ಭ ಮತದಾನಕ್ಕೆ ಎರಡು ದಿನಗಳಿರುವಾಗ ಕಾಂಗ್ರೆಸ್ ಪಕ್ಷ ಹಣ, ಹೆಂಡವನ್ನು ಹಂಚುವ ಮೂಲಕ ಕರಾಳರಾತ್ರಿಯ ನೆನಪನ್ನು ತಂದು ಕುಟಿಲ ತಂತ್ರದಿಂದ ಚುನಾವಣೆಯನ್ನು ಗೆದ್ದಿದೆ ಎಂದು ಬೊಮ್ಮಾಯಿ ಪ್ರತಿಕ್ರಿಯಿಸಿದರು.



