May 5, 2026
Tuesday, May 5, 2026
spot_img

ಮಲಯಾಳಂ ಚಿತ್ರರಂಗದ ಹಿರಿಯ ನಟ ಸಂತೋಷ್ ನಾಯರ್ ರಸ್ತೆ ಅಪಘಾತದಲ್ಲಿ ನಿಧನ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮಲಯಾಳಂ ಚಿತ್ರರಂಗದ ಹಿರಿಯ ನಟ ಸಂತೋಷ್ ನಾಯರ್ (65) ಇಂದು ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ. ಈ ಸುದ್ದಿ ಇಡೀ ಚಿತ್ರರಂಗವನ್ನೇ ಶೋಕಸಾಗರದಲ್ಲಿ ಮುಳುಗುವಂತೆ ಮಾಡಿದೆ.

ಇಂದು ಬೆಳಿಗ್ಗೆ ಸುಮಾರು 6:30ಕ್ಕೆ ಸಂತೋಷ್ ಪ್ರಯಾಣಿಸುತ್ತಿದ್ದ ಕಾರು ಮತ್ತು ಲಾರಿ ನಡುವೆ ಭೀಕರ ಡಿಕ್ಕಿ ಸಂಭವಿಸಿದೆ. ತಕ್ಷಣವೇ ಅವರನ್ನು ಅಡೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಅವರಿಗೆ ಹೃದಯಾಘಾತ ಸಂಭವಿಸಿ ಕೊನೆಯುಸಿರೆಳೆದಿದ್ದಾರೆ. ಕಾರಿನಲ್ಲಿದ್ದ ಅವರ ಪತ್ನಿ ಸುಭಾಶ್ರೀ ಕೂಡ ಗಂಭೀರವಾಗಿ ಗಾಯಗೊಂಡಿದ್ದು, ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

1982ರಲ್ಲಿ ‘ಇದು ನಮ್ಮ ಕಥೆ’ ಚಿತ್ರದ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಸಂತೋಷ್, 40 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ 100ಕ್ಕೂ ಹೆಚ್ಚು ಚಲನಚಿತ್ರಗಳು ಮತ್ತು ಹಲವು ಟಿವಿ ಶೋಗಳಲ್ಲಿ ನಟಿಸಿದ್ದಾರೆ. ನಾಯಕ, ಖಳನಾಯಕ ಮತ್ತು ಹಾಸ್ಯ ನಟನಾಗಿ ಅವರು ಸೈ ಎನಿಸಿಕೊಂಡಿದ್ದರು. ಕಳೆದ ತಿಂಗಳು ಬಿಡುಗಡೆಯಾದ ‘ಭರತನಾಟ್ಯಂ 2 ಮೋಹಿನಿಯಟ್ಟಂ’ ಇವರ ಕೊನೆಯ ಚಿತ್ರವಾಗಿದೆ. ಇದು ಕೆಲವೇ ದಿನಗಳಲ್ಲಿ OTT ಯಲ್ಲಿ ಬಿಡುಗಡೆಯಾಗಲಿದೆ.

ಸಂತೋಷ್ ನಾಯರ್ ನಿಧನಕ್ಕೆ ಚಿತ್ರರಂಗದ ಗಣ್ಯರು ಮತ್ತು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕಂಬನಿ ಮಿಡಿಯುತ್ತಿದ್ದು, ಅವರು ಪತ್ನಿ ಮತ್ತು ಕುಟುಂಬವನ್ನು ಅಗಲಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !