ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ ಪಂದ್ಯಾವಳಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 33 ರನ್‌ಗಳ ಹೀನಾಯ ಸೋಲು ಕಂಡ ಪಂಜಾಬ್ ಕಿಂಗ್ಸ್, ಪಾಯಿಂಟ್ ಪಟ್ಟಿಯಲ್ಲಿ ತನ್ನ ಅಗ್ರಸ್ಥಾನವನ್ನು ಕಳೆದುಕೊಂಡಿದೆ. ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ಪಂಜಾಬ್ ತಂಡದ ನಾಯಕ ಶ್ರೇಯಸ್ ಅಯ್ಯರ್, ತಂಡದ ಕಳಪೆ ಪ್ರದರ್ಶನದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಂದ್ಯದ ಸೋಲನ್ನು ವಿಶ್ಲೇಷಿಸಿದ ಶ್ರೇಯಸ್ ಅಯ್ಯರ್, ತಂಡದ ಫೀಲ್ಡಿಂಗ್ ವಿಭಾಗವನ್ನು ನೇರವಾಗಿ ದೂಷಿಸಿದರು. “ಆರಂಭದಲ್ಲಿ ನಾವು ಹಲವಾರು ಕ್ಯಾಚ್‌ಗಳನ್ನು ಕೈಬಿಟ್ಟೆವು. ಇದು ಎದುರಾಳಿ ತಂಡಕ್ಕೆ ಹೆಚ್ಚಿನ ರನ್ ಕಲೆಹಾಕಲು ಅವಕಾಶ ಮಾಡಿಕೊಟ್ಟಿತು. ಒಂದು ವೇಳೆ ನಾವು ಫೀಲ್ಡಿಂಗ್‌ನಲ್ಲಿ ಚುರುಕಾಗಿದ್ದರೆ, ಹೈದರಾಬಾದ್ ತಂಡದ ಮೊತ್ತವನ್ನು 30 ರಿಂದ 40 ರನ್‌ಗಳಷ್ಟು ಕಡಿಮೆ ಮಾಡಬಹುದಿತ್ತು. ಗುರಿ ದೊಡ್ಡದಾಗಿದ್ದರಿಂದ ನಮಗೆ ಹಿನ್ನಡೆಯಾಯಿತು” ಎಂದು ಅವರು ಬಹಿರಂಗವಾಗಿ ಒಪ್ಪಿಕೊಂಡರು.
ಬೌಲಿಂಗ್ ಮತ್ತು ಬ್ಯಾಟಿಂಗ್ ಬಗ್ಗೆಯೂ ಮಾತನಾಡಿದ ಅಯ್ಯರ್, “ಪಂದ್ಯ ಮುಂದುವರೆದಂತೆ ವಿಕೆಟ್ ನಿಧಾನವಾಯಿತು, ಚೆಂಡು ನಿಂತು ಬರುತ್ತಿತ್ತು. ಅಂತಹ ಸಮಯದಲ್ಲಿ ನಾವು ಸಂಘಟಿತ ಪ್ರದರ್ಶನ ನೀಡಲು ವಿಫಲರಾದೆವು. ಹೈದರಾಬಾದ್ ತಂಡವು ಅತ್ಯಂತ ಸಮರ್ಥವಾಗಿ ಆಡಿತು ಮತ್ತು ಪಂದ್ಯವನ್ನು ಗೆಲ್ಲುವುದು ಹೇಗೆ ಎಂಬುದನ್ನು ನಮಗೆ ತೋರಿಸಿಕೊಟ್ಟಿದೆ” ಎಂದು ಎದುರಾಳಿ ತಂಡವನ್ನು ಶ್ಲಾಘಿಸಿದರು.
ತಂಡ ಸೋತರೂ ಸಹ, ಯುವ ಪ್ರತಿಭೆ ಕೂಪರ್ ಕಾನೊಲಿ ಅವರ ಹೋರಾಟದ ಗುಣಕ್ಕೆ ನಾಯಕ ಅಯ್ಯರ್ ಮೆಚ್ಚುಗೆ ವ್ಯಕ್ತಪಡಿಸಿದರು. “ಕಾನೊಲಿ ಒಬ್ಬ ಅದ್ಭುತ ಆಟಗಾರ. ಮೈದಾನದಲ್ಲಿ ಅವರು ತೋರುವ ನಿರ್ಭೀತ ಮನೋಭಾವ ಎಲ್ಲರಿಗೂ ಮಾದರಿ. ಒತ್ತಡದ ಸಮಯದಲ್ಲಿ ದೊಡ್ಡ ರನ್ ಗಳಿಸುವ ಕೌಶಲ್ಯ ಅವರಿಗಿದೆ. ಇಂದಿನ ಪಂದ್ಯದಲ್ಲಿ ಅವರ ಇನ್ನಿಂಗ್ಸ್ ಮತ್ತು ಎಡಗೈ ಬ್ಯಾಟ್ಸ್‌ಮನ್‌ಗಳ ವಿರುದ್ಧದ ಅವರ ಆಟ ಪ್ರಶಂಸನೀಯ” ಎಂದು ಹೊಗಳಿದರು.
ಸತತ ಸೋಲುಗಳ ಹೊರತಾಗಿಯೂ ತಂಡದಲ್ಲಿ ಸಕಾರಾತ್ಮಕ ವಾತಾವರಣ ಇದೆ ಎಂದು ಅಯ್ಯರ್ ತಿಳಿಸಿದ್ದಾರೆ. “ಕಳೆದ ಮೂರು ಪಂದ್ಯಗಳಲ್ಲಿ ನಾವು ಮಾಡಿದ ತಪ್ಪುಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ನಕಾರಾತ್ಮಕ ವಿಚಾರಗಳಿಗೆ ಕಿವಿಗೊಡದೆ, ಹಳೆಯ ಲಯಕ್ಕೆ ಮರಳಿ ಮುಂದಿನ ಪಂದ್ಯಗಳಲ್ಲಿ ಬಲಿಷ್ಠವಾಗಿ ಕಮ್‌ಬ್ಯಾಕ್ ಮಾಡುತ್ತೇವೆ” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.



