August 13, 2026
Thursday, August 13, 2026
spot_img

ಮದ್ರಾಸ್ ಹೈಕೋರ್ಟ್‌ಗೆ ತಮಿಳುನಾಡು ಸರ್ಕಾರದ ಸವಾಲು: ಗೋಹತ್ಯೆ ನಿಷೇಧ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ

ಹೊಸದಿಗಹಂತ ಡಿಜಿಟಲ್‌ ಡೆಸ್ಕ್:

ತಮಿಳುನಾಡು ರಾಜ್ಯದಲ್ಲಿ ಸಂಪೂರ್ಣವಾಗಿ ಗೋಹತ್ಯೆ ನಿಷೇಧ ಹೇರಿ ಮದ್ರಾಸ್ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಿಎಂ ವಿಜಯ್ ನೇತೃತ್ವದ ಸರ್ಕಾರವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಹೈಕೋರ್ಟ್ ನೀಡಿರುವ ಈ ಆದೇಶವು ಪ್ರಸ್ತುತ ಇರುವ ಕಾನೂನು ಚೌಕಟ್ಟನ್ನು ಮೀರಿದ್ದಾಗಿದೆ ಎಂದು ವಾದಿಸಿರುವ ಸರ್ಕಾರ, ತೀರ್ಪಿಗೆ ತಡೆ ನೀಡುವಂತೆ ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದೆ.

ಮದ್ರಾಸ್ ಹೈಕೋರ್ಟ್‌ನ ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ಮತ್ತು ವಿ. ಲಕ್ಷ್ಮೀನಾರಾಯಣ್‌ನ್ನೊಳಗೊಂಡ ವಿಭಾಗೀಯ ಪೀಠವು ಕಳೆದ ಮೇ 27ರಂದು ಮಹತ್ವದ ಆದೇಶವೊಂದನ್ನು ನೀಡಿತ್ತು. ಅನಧಿಕೃತ ಸ್ಥಳಗಳಲ್ಲಿ ಪ್ರಾಣಿ ವಧೆ ಮಾಡುವುದನ್ನು ನಿರ್ಬಂಧಿಸಿದ್ದ ನ್ಯಾಯಾಲಯ, ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಅಥವಾ ಯಾವುದೇ ದಿನದಂದು ಹಸು ಅಥವಾ ಕರುಗಳನ್ನು ಕೊಲ್ಲದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ತಮಿಳುನಾಡು ಮುಖ್ಯ ಕಾರ್ಯದರ್ಶಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತು.

ತಮಿಳುನಾಡು ಸರ್ಕಾರದ ವಾದ

ತಮಿಳುನಾಡು ಸರ್ಕಾರದ ಪ್ರಕಾರ, 1958ರ ಪ್ರಾಣಿ ಸಂರಕ್ಷಣೆ ಕಾಯ್ದೆಯ ಸೆಕ್ಷನ್ 4ರ ಅಡಿಯಲ್ಲಿ ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ ಗೋಹತ್ಯೆಗೆ ಅವಕಾಶವಿದೆ. ಉದಾಹರಣೆಗೆ, ಹಸುವಿಗೆ 10 ವರ್ಷಕ್ಕಿಂತ ಹೆಚ್ಚಿನ ವಯಸ್ಸಾಗಿದ್ದರೆ, ಸಂತಾನೋತ್ಪತ್ತಿಗೆ ಅಸಮರ್ಥವಾಗಿದ್ದರೆ ಮತ್ತು ಅದಕ್ಕೆ ಸಂಬಂಧಿಸಿದಂತೆ ಸಕ್ಷಮ ಅಧಿಕಾರಿಯಿಂದ ಪ್ರಮಾಣಪತ್ರ ಪಡೆದಿದ್ದರೆ ಮಾತ್ರ ಅಂತಹ ಹಸುವನ್ನು ವಧೆ ಮಾಡಲು ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆ. ಆದರೆ ಹೈಕೋರ್ಟ್ ಈ ಕಾನೂನಿನ ವ್ಯಾಪ್ತಿಯನ್ನು ಮೀರಿ ಒಟ್ಟಾರೆಯಾಗಿ ಸಂಪೂರ್ಣ ನಿಷೇಧ ಹೇರಿರುವುದರಿಂದ, ವಿರೋಧಾಭಾಸಗಳು ಸೃಷ್ಟಿಯಾಗಿವೆ ಎಂದು ಸರ್ಕಾರ ತನ್ನ ಅರ್ಜಿಯಲ್ಲಿ ಉಲ್ಲೇಖಿಸಿದೆ.

ಇದನ್ನೂ ಓದಿ:

ಸುಪ್ರೀಂ ಕೋರ್ಟ್ ಹಿಂದಿನ ತೀರ್ಪುಗಳು

ಹಿಂದೂ ಮಕ್ಕಳ್ ಕಚ್ಚಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಸೂರ್ಯ ಎಂಬವರು ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವ ಕಾನೂನುಬಾಹಿರ ಗೋಹತ್ಯೆಯನ್ನು ತಡೆಯಲು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸುವಾಗ ಹೈಕೋರ್ಟ್ ಈ ಆದೇಶ ನೀಡಿತ್ತು. ಆ ಸಂದರ್ಭದಲ್ಲಿ ನ್ಯಾಯಾಲಯವು ಸಂವಿಧಾನದ ವಿಧಿ 48 ಅನ್ನು ಉಲ್ಲೇಖಿಸಿತ್ತು. ಇದು ಗೋವುಗಳು, ಕರುಗಳು ಮತ್ತು ಇತರ ಹಾಲು ಕೊಡುವ ಹಾಗೂ ಭಾರ ಹೊರಬಲ್ಲ ಜಾನುವಾರುಗಳ ವಧೆಯನ್ನು ನಿಷೇಧಿಸಲು ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶಿಸುತ್ತದೆ.

ಇದರೊಂದಿಗೆ, ಬಕ್ರೀದ್ ಹಬ್ಬದಂದು ಗೋಹತ್ಯೆ ಮಾಡುವುದು ಇಸ್ಲಾಂ ಧರ್ಮದ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಎಂಬ ಸುಪ್ರೀಂ ಕೋರ್ಟ್‌ನ ಹಳೆಯ ತೀರ್ಪುಗಳನ್ನೂ ಹೈಕೋರ್ಟ್ ಉಲ್ಲೇಖಿಸಿತ್ತು. ಮುಸ್ಲಿಮರು ಹಬ್ಬದ ದಿನದಂದು ಕಡ್ಡಾಯವಾಗಿ ಹಸುವನ್ನೇ ಬಲಿ ಕೊಡಬೇಕಾಗಿಲ್ಲ ಮತ್ತು ಅವರ ಧಾರ್ಮಿಕ ನಂಬಿಕೆಯನ್ನು ಪ್ರದರ್ಶಿಸಲು ಇದು ಏಕೈಕ ಮಾರ್ಗವಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತ್ತು. ಸದ್ಯ ಸುಪ್ರೀಂ ಕೋರ್ಟ್‌ನಲ್ಲಿ ಮುಂಬರುವ ದಿನಗಳಲ್ಲಿಈ ಸಾಂವಿಧಾನಿಕ ಮತ್ತು ಕಾನೂನಾತ್ಮಕ ಬಿಕ್ಕಟ್ಟಿಗೆ ಯಾವ ರೀತಿಯ ತೀರ್ಪು ನೀಡಲಿದೆ ಎಂಬುದು ಕುತೂಹಲ ಮೂಡಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !