ಹೊಸದಿಗಂತ ವರದಿ ಉಳ್ಳಾಲ:
ಕರಾವಳಿಯಲ್ಲಿ ವರುಣನ ಅಬ್ಬರ ಜೋರಾಗಿದ್ದು, ನಿನ್ನೆ ರಾತ್ರಿಯಿಡೀ ಸುರಿದ ಧಾರಾಕಾರ ಮಳೆಗೆ ತೊಕ್ಕೊಟ್ಟು ಸಮೀಪದ ಕೆರೆಬೈಲ್ ಎಂಬಲ್ಲಿ ಎಸ್ಟೇಟ್ ಒಂದರ ಭಾರೀ ಎತ್ತರದ ಆವರಣ ಗೋಡೆ ಕುಸಿದು ಬಿದ್ದಿದೆ. ಈ ಗೋಡೆ ಪಕ್ಕದಲ್ಲೇ ಇದ್ದ ಒಂಟಿ ಮನೆಯ ಮೇಲೆ ಬಿದ್ದಿದ್ದು, ಇಡೀ ಮನೆ ಸಂಪೂರ್ಣ ನೆಲಸಮವಾಗಿದೆ.
ಈ ಮನೆಯಲ್ಲಿ ಇರಬೇಕಿದ್ದ ಐದು ಜನರ ಕುಟುಂಬ ಅದೃಷ್ಟವಶಾತ್ ಪಾರಾಗಿದೆ. ಮಳೆ ಜೋರಾಗಿ ಸುರಿದರೆ ಅಪಾಯ ತಪ್ಪಿದ್ದಲ್ಲ ಎಂದು ಎಚ್ಚರಿಕೆಯಿಂದ ಕುಟುಂಬ ಸದಸ್ಯರು ಎರಡು ವಾರಗಳ ಹಿಂದಷ್ಟೆ ಮನೆಯಿಂದ ಸ್ಥಳಾಂತರಗೊಂಡಿದ್ದರು. ಈ ಕಾರಣದಿಂದ ದೊಡ್ಡ ಅವಘಡವೊಂದು ಸಂಭವಿಸುವುದು ತಪ್ಪಿದಂತಾಗಿದೆ.
ಎಸ್ಟೇಟ್ ನ ಬೃಹತ್ ಆವರಣ ಗೋಡೆಯು ಕುಸಿದು ಬಿದ್ದ ಪರಿಣಾಮ ಕೆರೆಬೈಲ್ ಗುಡ್ಡೆಯ ನಿವಾಸಿ ಕಿಶೋರ್ ಎಂಬವರ ಮನೆಯು ಸಂಪೂರ್ಣ ನೆಲಸಮಗೊಂಡಿದೆ. ಕೆರೆಬೈಲ್ ನ ಗುಡ್ಡ ಪ್ರದೇಶದ ತುದಿಯಲ್ಲಿ ಡೆಲ್ಟ ಇನ್ಫ್ರಾಲೋಜಿಸ್ಟಿಕ್ಸ್ ವರ್ಲ್ಡ್ ವೈಡ್ ಲಿ.ಕಂಪನಿ ಮಾಲಕರಾದ ಅಹಮ್ಮದ್ ಮೊಯ್ದಿನ್ ಎಂಬವರು ಕಳೆದ ಕೆಲ ವರುಷಗಳ ಹಿಂದೆ ಬೃಹತ್ ಐಷಾರಾಮಿ ಎಸ್ಟೇಟ್ ಒಂದನ್ನ ನಿರ್ಮಿಸಿದ್ದರು. ಬೃಹತ್ ವಿಸ್ತೀರ್ಣವುಳ್ಳ ಎಸ್ಟೇಟ್ ಸುತ್ತಲೂ ಎತ್ತರದ ಆವರಣದ ಗೋಡೆಯನ್ನು ನಿರ್ಮಿಸಲಾಗಿತ್ತು. ಕಳೆದ ವರುಷ ಸುರಿದ ಭಾರೀ ಮಳೆಗೆ ಎಸ್ಟೇಟ್ ನ ಆವರಣಗೋಡೆಯು ಕುಸಿದು ನೆರೆಯ ಕಿಶೋರ್ ಅವರ ಮನೆಯ ಕಡೆಗೆ ವಾಲಿ ನಿಂತಿತ್ತು.

ಈ ಬಗ್ಗೆ ಕಿಶೋರ್ ಅವರು ಸ್ಥಳೀಯ ಉಳ್ಳಾಲ ನಗರಸಭೆ ಅಧಿಕಾರಿಗಳಿಗೆ ದೂರನ್ನ ನೀಡಿದ್ದರು. ಮುಂಜಾಗೃತ ಕ್ರಮವಾಗಿ ನಗರಸಭೆಯ ಅಧಿಕಾರಿಗಳು ಕಿಶೋರ್ ಅವರ ಕುಟುಂಬ ಸೇರಿದಂತೆ ಎಸ್ಟೇಟ್ ಆವರಣ ಕುಸಿತದ ಭೀತಿಗೊಳಪಟ್ಟ ನೆರೆಯ ಹತ್ತು ಮನೆಗಳ ಕುಟುಂಬಸ್ಥರನ್ನ ಬಾಡಿಗೆ ಮನೆಗಳಿಗೆ ಸ್ಥಳಾಂತರಿಸಿದ್ದರು. ನಿನ್ನೆ ರಾತ್ರಿಯಿಡೀ ಸುರಿದ ಧಾರಾಕಾರ ಮಳೆಗೆ ಎಸ್ಟೇಟ್ ಆವರಣಗೋಡೆಯು ಕುಸಿದು ಕಿಶೋರ್ ಅವರ ಮನೆಯು ಸಂಪೂರ್ಣವಾಗಿ ನೆಲಸಮಗೊಂಡಿದ್ದು,ಘಟನೆಗೆ ಉಳ್ಳಾಲ ನಗರಸಭೆಯ ಅಧಿಕಾರಿಗಳ ನಿರ್ಲಕ್ಷವೇ ಕಾರಣವೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಮಯ ಪ್ರಜ್ನೆ ಮೆರೆದು ಬಚಾವಾದ ಕುಟುಂಬ
ವಾಲಿ ನಿಂತಿದ್ದ ಎಸ್ಟೇಟ್ ಆವರಣ ಗೋಡೆಯಿಂದ ಅಪಾಯ ಎದುರಾಗುವ ಬಗ್ಗೆ ನಿರೀಕ್ಷಿಸಿದ್ದ ಕಿಶೋರ್ ಅವರು ಅಮ್ಮ ಶಕುಂತಳ,ಪತ್ನಿ ಭಾರತಿ ಹಾಗೂ ಇಬ್ಬರು ಮಕ್ಕಳು ಸಮೇತ ಎರಡು ವಾರಗಳ ಹಿಂದಷ್ಟೆ ನಗರದ ಕಾವೂರಿನ ಪತ್ನಿ ಮನೆಗೆ ತೆರಳಿ ಅಲ್ಲೇ ನೆಲೆಸಿದ್ದರು. ಘಟನೆ ವೇಳೆ ಮನೆಯಲ್ಲಿ ಯಾರೂ ಇಲ್ಲದ ಪರಿಣಾಮ ಸಂಭವನೀಯ ಘೋರ ಅನಾಹುತವೊಂದು ತಪ್ಪಿದಂತಾಗಿದೆ.

ಉಳ್ಳಾಲ ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯ?
ಕಳೆದ ವರುಷವೇ ಎಸ್ಟೇಟ್ ಆವರಣ ಗೋಡೆಯು ಕುಸಿದು ವಾಲಿ ನಿಂತಿದ್ದು ಇದನ್ನ ಸರಿ ಪಡಿಸುವ ಬಗ್ಗೆ ಉಳ್ಳಾಲ ನಗರಸಭೆಯ ಅಂದಿನ ಪೌರಾಯುಕ್ತರು ಸಮರ್ಪಕ ಕ್ರಮ ಕೈಗೊಂಡಿಲ್ಲ. ಆವರಣ ಗೋಡೆಯಿಂದ ಅಪಾಯ ಸಂಭವಿಸುವ ನಿಟ್ಟಿನಲ್ಲಿ ಮುಂಜಾಗೃತಾ ಕ್ರಮವಾಗಿ ಸ್ಥಳೀಯ ಹತ್ತು ಮನೆಗಳ ಕುಟುಂಬಸ್ಥರನ್ನ ಅಧಿಕಾರಿಗಳು ಬಾಡಿಗೆ ಮನೆಗಳಿಗೆ ಸ್ಥಳಾಂತರಿಸಿದ್ದರು. ಸಂತ್ರಸ್ತರಿಗೆ ಮನೆ ಬಾಡಿಗೆಯನ್ನ ನೀಡುವ ಭರವಸೆ ನೀಡಿದ್ದ ಅಧಿಕಾರಿಗಳು ಕೇವಲ ಎರಡು ಕುಟುಂಬಗಳಿಗೆ ಮಾತ್ರ ಒಂದು ತಿಂಗಳ ಮನೆ ಬಾಡಿಗೆಯನ್ನು ನೀಡಿ ವಂಚಿಸಿದ್ದರೆಂದು ಸ್ಥಳೀಯ ಮುಖಂಡರಾದ ಪ್ರಕಾಶ್ ಪಿಂಟೋ ಅವರು ಆರೋಪಿಸಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಕಿಶೋರ್ ಅವರು ಮನೆಯನ್ನ ಕಳಕೊಂಡಿದ್ದು,ಅದೃಷ್ಟವಶಾತ್ ಅವರ ಕುಟುಂಬವು ಬದುಕುಳಿದಿದೆ. ಎಸ್ಟೇಟ್ ಆವರಣ ಗೋಡೆಯು ಮತ್ತೆ ಕುಸಿಯುವ ಸ್ಥಿತಿಯಲ್ಲಿದ್ದು ನೆರೆಯ ಕಾಶಿನಾಥ್ ,ಮಣಿ,ರಝಾಕ್ ,ನಝೀರ್,ಅನ್ನು,ರಾಜ ಕೊಟ್ಟಾರಿ,ಸತ್ಯ ಅವರ ಮನೆಗಳೂ ಅಪಾಯದಲ್ಲಿದೆ.ನಗರಸಭೆ ಅಧಿಕಾರಿಗಳು ತಕ್ಷಣವೇ ಮನೆ ಮಂದಿಯನ್ನ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕೆಂದು ಪ್ರಕಾಶ್ ಪಿಂಟೊ ಆಗ್ರಹಿಸಿದ್ದಾರೆ.



