ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡು ವಿಧಾನಸಭಾ ಚುನಾವಣಾ ಫಲಿತಾಂಶದ ನಂತರ ರಾಜ್ಯದಲ್ಲಿ ಸೃಷ್ಟಿಯಾಗಿದ್ದ ರಾಜಕೀಯ ಅನಿಶ್ಚಿತತೆಗೆ ಎಂ.ಕೆ. ಸ್ಟಾಲಿನ್ ಅವರು ಪೂರ್ಣವಿರಾಮ ಇಟ್ಟಿದ್ದಾರೆ. ಬಹುಮತದ ಕೊರತೆಯ ನಡುವೆಯೂ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ದಳಪತಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ ಸರ್ಕಾರ ರಚಿಸಲು ಸ್ಟಾಲಿನ್ ಹಸಿರು ನಿಶಾನೆ ತೋರಿಸಿದ್ದಾರೆ.
ವಿಧಾನಸಭೆಯಲ್ಲಿ ಸರ್ಕಾರ ರಚಿಸಲು ಅಗತ್ಯವಿರುವ ಮ್ಯಾಜಿಕ್ ನಂಬರ್‌ಗಿಂತ 11 ಸ್ಥಾನಗಳ ಕೊರತೆ ಎದುರಿಸುತ್ತಿದ್ದ ವಿಜಯ್ ಅವರಿಗೆ ಡಿಎಂಕೆ ಬೆಂಬಲ ಘೋಷಿಸಿದೆ. “ರಾಜ್ಯದಲ್ಲಿ ಯಾವುದೇ ಸಾಂವಿಧಾನಿಕ ಬಿಕ್ಕಟ್ಟು ಉಂಟಾಗಬಾರದು ಮತ್ತು ಜನರ ತೀರ್ಪನ್ನು ಗೌರವಿಸಬೇಕು ಎಂಬ ಕಾರಣಕ್ಕೆ ವಿಜಯ್ ಅವರು ಸರ್ಕಾರ ರಚಿಸಲಿ” ಎಂದು ಎಂ.ಕೆ. ಸ್ಟಾಲಿನ್ ಮಾಧ್ಯಮಗಳ ಮುಂದೆ ಸ್ಪಷ್ಟಪಡಿಸಿದ್ದಾರೆ. ಇದರಿಂದಾಗಿ ಎಐಎಡಿಎಂಕೆಯೊಂದಿಗೆ ಮೈತ್ರಿ ಮಾಡಿಕೊಳ್ಳಬಹುದು ಎಂಬ ಊಹಾಪೋಹಗಳಿಗೆ ಬ್ರೇಕ್ ಬಿದ್ದಿದೆ.
ಅಧಿಕಾರ ಬಿಟ್ಟುಕೊಡಲು ಸಮ್ಮತಿಸಿರುವ ಸ್ಟಾಲಿನ್, ತಮ್ಮ ಅವಧಿಯ ಕೆಲವು ಮಹತ್ವಾಕಾಂಕ್ಷಿ ಯೋಜನೆಗಳನ್ನು ಮುಂದುವರಿಸುವಂತೆ ವಿಜಯ್ ಅವರಿಗೆ ಮನವಿ ಮಾಡಿದ್ದಾರೆ:
ಬೆಳಗಿನ ಉಪಹಾರ ಯೋಜನೆ: ಶಾಲಾ ಮಕ್ಕಳ ಹಸಿವು ನೀಗಿಸುವ ಈ ಯೋಜನೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬಾರದು.
ಮಹಿಳೆಯರ ಆರ್ಥಿಕ ನೆರವು: ಪ್ರತಿ ತಿಂಗಳು ಮಹಿಳೆಯರಿಗೆ ನೀಡಲಾಗುತ್ತಿರುವ 1,000 ರೂ. ಯೋಜನೆಯನ್ನು ಯಥಾವತ್ತಾಗಿ ಮುಂದುವರಿಸಬೇಕು.
ವಿಜಯ್ ತಮ್ಮ ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ 2,500 ರೂ. ನೀಡುವುದಾಗಿ ಘೋಷಿಸಿದ್ದಾರೆ. ಇದರ ಬಗ್ಗೆ ಪ್ರತಿಕ್ರಿಯಿಸಿದ ಸ್ಟಾಲಿನ್, “ಇಷ್ಟು ದೊಡ್ಡ ಮೊತ್ತ ನೀಡುವುದು ಆರ್ಥಿಕವಾಗಿ ಸವಾಲು. ಆದರೆ ಕನಿಷ್ಠ ಈಗ ಜಾರಿಯಲ್ಲಿರುವ 1,000 ರೂ.ಗಳನ್ನಾದರೂ ಹೊಸ ಸರ್ಕಾರ ಉಳಿಸಿಕೊಳ್ಳಲಿ” ಎಂದು ಸಲಹೆ ನೀಡಿದ್ದಾರೆ.
ಸ್ಟಾಲಿನ್ ಅವರ ಈ ನಿರ್ಧಾರದಿಂದಾಗಿ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರಿಗೆ ಇದ್ದ ಗೊಂದಲಗಳು ಬಗೆಹರಿದಿವೆ. ಸಂಖ್ಯಾಬಲದ ಕೊರತೆಯ ಆತಂಕ ದೂರವಾಗಿರುವುದರಿಂದ, ವಿಜಯ್ ಅವರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಶೀಘ್ರದಲ್ಲೇ ರಾಜಭವನದಿಂದ ಅಧಿಕೃತ ಆಮಂತ್ರಣ ಸಿಗುವ ಸಾಧ್ಯತೆಯಿದೆ.



