ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನ ರಾಜಕೀಯದಲ್ಲಿ ಸರ್ಕಾರ ರಚನೆ ಚರ್ಚೆಗಳು ತೀವ್ರವಾಗಿರುವ ಹೊತ್ತಿನಲ್ಲಿ, ವಿಜಯ್ ನೇತೃತ್ವದ ಟಿವಿಕೆಗೆ ಕಾಂಗ್ರೆಸ್ ಬೆಂಬಲ ನೀಡಿರುವ ವಿಚಾರ ಹೊಸ ಚರ್ಚೆಗೆ ಕಾರಣವಾಗಿದೆ. ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿದ ಕರ್ನಾಟಕ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಜನಹಿತ ಮತ್ತು ರಾಜಕೀಯ ಸ್ಥಿರತೆಯನ್ನು ಗಮನದಲ್ಲಿಟ್ಟುಕೊಂಡೇ ಕಾಂಗ್ರೆಸ್ ಈ ನಿರ್ಧಾರ ಕೈಗೊಂಡಿದೆ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜಕೀಯ ನಿಲುವುಗಳನ್ನೂ ತೀವ್ರವಾಗಿ ಟೀಕಿಸಿದರು. ರಾಜಕೀಯದಲ್ಲಿ ನಡೆಯುವ ಮೈತ್ರಿ, ಬೆಂಬಲ ಮತ್ತು ಬದಲಾವಣೆಗಳ ಬಗ್ಗೆ ಪ್ರಶ್ನಿಸುವ ಮೊದಲು ಬಿಜೆಪಿ ತನ್ನ ಹಳೆಯ ರಾಜಕೀಯ ನಡೆಗಳನ್ನು ನೆನಪಿಸಿಕೊಳ್ಳಬೇಕು ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ:
ತಮಿಳುನಾಡಿನಲ್ಲಿ ಆಡಳಿತ ರಚನೆಗೆ ಅಗತ್ಯ ಸಂಖ್ಯಾಬಲ ಒದಗಿಸುವ ಉದ್ದೇಶದಿಂದ ಕಾಂಗ್ರೆಸ್ ಬೆಂಬಲ ಘೋಷಿಸಿದೆ. ಜನರ ಪರವಾಗಿ ಸ್ಥಿರ ಸರ್ಕಾರ ಬರಬೇಕೆಂಬ ಆಶಯವೇ ಈ ನಿರ್ಧಾರದ ಹಿಂದಿನ ಕಾರಣ ಎಂದು ಪರಮೇಶ್ವರ್ ಸ್ಪಷ್ಟಪಡಿಸಿದರು.
ರಾಜ್ಯಪಾಲರ ಪಾತ್ರ ಸಂವಿಧಾನಾತ್ಮಕವಾಗಿದ್ದು, ಸಂಖ್ಯಾಬಲದ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಅಂತಿಮವಾಗಿ ರಾಜ್ಯದ ರಾಜಕೀಯ ದಿಕ್ಕನ್ನು ನಿರ್ಧರಿಸುವುದು ಸಂವಿಧಾನದ ಚೌಕಟ್ಟಿನಲ್ಲಿಯೇ ನಡೆಯಲಿದೆ ಎಂದು ಅವರು ಹೇಳಿದರು.



